ಹುಟ್ಟುಹಬ್ಬ ಅಂದರೇನೆ ಭಯ ಪಡುವಂತಾಗಿದೆ-ನಟ ಯಶ್

ಗದಗ: ಹುಟ್ಟುಹಬ್ಬ ಅಂದರೇನೆ ಭಯ ಪಡುವಂತಾಗಿದೆ,ನನಗೆ ಹುಟ್ಟುಹಬ್ಬ ಅಂದರೆ ಅಸಹ್ಯ ಅನ್ನಿಸಿ ಬಿಟ್ಟಿದೆ ಎಂದು ರಾಕಿಂಗ್ ಸ್ಟಾರ್ ಯಶ್ ನೊಂದು ನುಡಿದಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್​ ಶಾಕ್​ನಿಂದ ಅಭಿಮಾನಿಗಳಾದ ಹನುಮಂತ (21), ಮುರಳಿ ನಡವಿನಮನಿ (20) ನವೀನ್ (19) ಮೃತಪಟ್ಟಿದ್ದರು.

ಹಾಗಾಗಿ ಗದಗ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಅಭಿಮಾನಿಗಳ ಮನೆಗೆ ತೆರಳಿ ಯಶ್ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಅವರು, ಬ್ಯಾನರ್ ಹಾಕೋದು ಕಟೌಟ್ ಕಟ್ಟೊದು ಬೇಡ,ದಯವಿಟ್ಟು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದರು.

ಜನ್ಮದಿನ ಆಚರಿಸಬೇಡಿ ಎಂದು ಹೇಳಿದರೆ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಏನು ಮಾಡುವುದು ಎಂದು ಅಸಹಾಯಕತೆ ತೋಡಿಕೊಂಡರು.

ಬ್ಯಾನರ್, ಕಟೌಟ್ ಹಾಕುವುದನ್ನು ನಾನು ಇಷ್ಟಪಡುವುದಿಲ್ಲ. ನನ್ನ ಮೇಲೆ ಪ್ರೀತಿ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಮನವಿ ಮಾಡಿದರು.

ಮನೆ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ನೆರವು ನೀಡುತ್ತೇನೆ. ಆದರೆ ಏನು ಕೊಟ್ಟರೂ ಮನೆ ಮಕ್ಕಳನ್ನು ತಂದುಕೊಡಲು ಸಾದ್ಯವಿಲ್ಲ ಎಂದು ನೋವಿನಿಂದ ನುಡಿದರು ಯಶ್.

ಯಶ್‌ ಆಗಮನದ ಮಾಹಿತಿ ತಿಳಿದು ಸೂರಣಗಿ ಗ್ರಾಮಕ್ಕೆ ಜನಸಾಗರ ಹರಿದು ಬಂದಿತ್ತು.

ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆಯುತ್ತಿರುವ ಅವಘಡಗಳಿಂದ ಯಶ್ ಹೆದರಿದ್ದಾರೆ

2019ರಲ್ಲೂ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಯಶ್​ ಅವರನ್ನು ನೋಡಲು ಬಿಡದ ಕಾರಣ ಪೆಟ್ರೋಲ್ ಸುರಿದುಕೊಂಡು ರವಿ ಎಂಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದರು.