ಮೈಸೂರು: ವಿಧಾನ ಪರಿಷತ್ ನಾಮ ನಿರ್ದೇಶಿತ ಸದಸ್ಯ ಹೆಚ್ ವಿಶ್ವನಾಥ್ ಅವರು ಮೈಸೂರು ನ್ಯಾಯಾಲಯದ ಬಳಿ ಗಾಂಧಿ ಪ್ರತಿಮೆ ಎದುರು ಸೋಮವಾರ ಪ್ರಾಯಶ್ಚಿತ ಸತ್ಯಾಗ್ರಹ ಹಮ್ಮಿಕೊಂಡು ವಿನೂತನವಾಗಿ ಸಾರ್ವಜನಿಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜಕೀಯ ಪಲ್ಲಟದ ಸುಳಿಗೆ ಸಿಲುಕಿ ಸಮ್ಮಿಶ್ರ ಸರ್ಕಾರ ಪತನಕ್ಕೆ ತಾವು ಕಾರಣರಾದೆವು ಎಂದು ಹೇಳಿದರು.
ಜನವಿರೋಧಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟವರಲ್ಲಿ ನಾನೂ ಒಬ್ಬ,
ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಶ್ಚಾತ್ತಾಪ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನೆಂದು ಗುರುತಿಸಿಕೊಂಡಿದ್ದ ನಾನು, 2018ರ ಚುನಾವಣೆ ಬಳಿಕ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಪತನಗೊಳಿಸಲು ಬಿಜೆಪಿ ಜೊತೆ ಕೈ ಜೋಡಿಸಿ, ಬಾಂಬೆ ಪ್ರವಾಸ ನಡೆಸಿದ್ದೆ ಎಂದು ಅಂದಿನ ಪ್ರಸಂಗವನ್ನು ವಿವರಿಸಿದರು.
ಹೀಗೆ ನೂತನ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ನಾನು ಕಾರಣೀಭೂತನಾದೆ,ಮುಂದೆ ಇದೇ ಸರ್ಕಾರ ಜನರನ್ನು ಸಂಕಷ್ಟಕ್ಕೆ ದೂಡಿ, ನೋವಿನ ದಿನಗಳನ್ನು ನೋಡುವಂತೆ ಮಾಡಿದೆ,ಹೀಗಾಗಿ ನಾನು ಈ ಸತ್ಯಾಗ್ರಹ ನಡೆಸಿ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು.
ಕರಾಹಿಂಜಾವೇ ಅಧ್ಯಕ್ಷ ಕೆ.ಎಸ್.ಶಿವರಾಮು, ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಸೇರಿದಂತೆ ಹಲವರು ವಿಶ್ವನಾಥ್ ಗೆ ಸಾಥ್ ನೀಡಿದರು.