ಬೆಂಗಳೂರು: ಇಂದಿರಾ ಕ್ಯಾಂಟೀನ್ ಗಳಿಗೆ ಮರು ಜೀವ ಕೊಡುವ ಕುರಿತು ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯ ಆಡಳಿತಗಾರ ರಾಕೇಶ್ ಸಿಂಗ್ ಸೇರಿದಂತೆ ಎಲ್ಲಾ ವಲಯಗಳ ಅಧಿಕಾರಿಗಳು, ಮುಖ್ಯ ಇಂಜಿನಿಯರ್ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ಜಾರಿಗೆ ತರಲಾಗಿತ್ತು. ಅಲ್ಲಿ ರೂ.10 ಗೆ ಮಧ್ಯಾಹ್ನ ಊಟ, ಬೆಳಗ್ಗೆ 10 ರೂಪಾಯಿಗೆ ತಿಂಡಿ ಕೊಡಲಾಗುತ್ತಿತ್ತು.
ಇದರಿಂದ ಬಹಳಷ್ಟು ಕೂಲಿ ಕಾರ್ಮಿಕರು ದಿನಗೂಲಿ ನೌಕರರು ಅಷ್ಟೇ ಏಕೆ ಸ್ಥಳೀಯ ನಿವಾಸಿಗಳು ಕೂಡ ಇಂದಿರಾ ಕ್ಯಾಂಟೀನ್ ಗಳಲ್ಲಿ ತಿಂಡಿ, ಊಟ ಮಾಡಿ ತೃಪ್ತಿ ಪಡುತ್ತಿದ್ದರು.ಬಡ ಜನರಿಗಂತೂ ಇಂದಿರಾ ಕ್ಯಾಂಟೀನ್ ಗಳು ಬಹಳ ಉಪಯೋಗವಾಗಿದ್ದವು.
ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂದಿರಾ ಕ್ಯಾಂಟೀನ್ ಗಳು ತೆರೆಮರೆಗೆ ಸರಿದಂತಾಗಿದ್ದವು, ಎಲ್ಲೋ ಒಂದೊಂದು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು.
ಆದರೆ ರಾಜ್ಯದಲ್ಲೆಡೆ ಇಂದಿರಾ ಕ್ಯಾಂಟೀನ್ ಗಳು ಬೇಕೆಂದು ಸಾರ್ವಜನಿಕರು ಒತ್ತಡ ತಂದಿದ್ದರು ಆದರೆ ಏನೋ ಪ್ರಯೋಜನ ಆಗಿರಲಿಲ್ಲ.
ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಹಾಗಾಗಿ ಇದರ ಕ್ಯಾಂಟೀನ್ ಗಳನ್ನು ಮತ್ತೆ ಒಳ್ಳೆಯ ರೀತಿಯಲ್ಲಿ ಜಾರಿಗೆ ತಂದು ಬಡ ಜನರಿಗೆ ಹಾಗೂ ಸಾಮಾನ್ಯ ವರ್ಗದವರಿಗೂ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ.
ಹಾಗಾಗಿ ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿಯಲ್ಲಿ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಇಂದಿರಾ ಕ್ಯಾಂಟೀನ್ ಗಳಿವೆ, ಅವು ಎಷ್ಟರ ಮಟ್ಟಿಗೆ ನಡೆಯುತ್ತಿವೆ, ಎಷ್ಟು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂಬ ಬಗ್ಗೆ ವಲಯವಾರು ಅಧಿಕಾರಿಗಳಿಂದ ಮಾಹಿತಿ ಪಡೆದರು.