ಇನ್ನೂ ಟೇಕಾಫ್ ಆಗದ ಕಾಂಗ್ರೆಸ್ -ಸಚಿವ ಎಸ್ ಟಿ ಎಸ್

ಕೆ.ಆರ್.ಪೇಟೆ, (ಮಂಡ್ಯ): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಕಾಂಗ್ರೆಸ್ ಪಕ್ಷ ಇನ್ನೂ ಟೇಕಾಫ್ ಆಗಲಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಅವರು ಇಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದರು.
ನಮ್ಮ ಭಾರತೀಯ ಜನತಾ ಪಕ್ಷವು ಈಗಾಗಲೇ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಟೇಕಾಫ್ ಆಗಿದೆ. ಬಸವಕಲ್ಯಾಣ, ಮಸ್ಕಿ ಹಾಗೂ ಬೆಳಗಾವಿ ಲೋಕಸಭೆಯಲ್ಲೂ ಟೇಕಾಫ್ ಆಗುತ್ತದೆ. ಆದರೆ, ನೀವಿಬ್ಬರೂ ಕೂಡ ಮಲಗಿಯೇ ಇದ್ದೀರಿ ಎಂದು ಅವರು ಹೇಳಿದರು.
ಬಿಜೆಪಿ ಬೆಳವಣಿಗೆ ಹೊಂದಲು ಎಲ್ಲ ಕಡೆ ಪಕ್ಷ ಗೆಲ್ಲಬೇಕಿದೆ. ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. 85ರಷ್ಟು ಬಿಜೆಪಿ ಕಾರ್ಯಕರ್ತರು ಗೆಲ್ಲಬೇಕು ಎಂಬ ನಿಟ್ಟಿನಲ್ಲಿ 30 ಜಿಲ್ಲೆಯಲ್ಲಿಯೂ ಸಹ ಒಬ್ಬೊಬ್ಬ ನಾಯಕರನ್ನು ಮಾಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವನ್ನು ಪಕ್ಷ ಸಾಧಿಸಿತು. ಇದರ ಹಿಂದೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರ ಪಾತ್ರ ದೊಡ್ಡದು ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.
ರಾಜರಾಜೇಶ್ವರಿ ನಗರದಲ್ಲಿಯೂ ಸಹ ಕಾಂಗ್ರೆಸ್ ನಿಂದ ಬಂದಂತಹ ಮುನಿರತ್ನ ಅವರು ಬರೋಬ್ಬರಿ 57 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದಕ್ಕೆ ಮೂಲ ಕಾರಣ ಚಕ್ರವರ್ತಿ ಅಶೋಕ್ ಅವರು ಎಂದರು.
ಕಾಂಗ್ರೆಸ್ ನಿಂದ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಮಾಡಿದ್ದಲ್ಲದೆ, ಇಲ್ಲಸಲ್ಲದ ಆರೋಪವನ್ನೂ ಮಾಡಲಾಯಿತು. ಅವರ ತಂತ್ರಗಳನ್ನೆಲ್ಲ ತಲೆಕೆಳಗು ಮಾಡಿದ್ದು ಚಕ್ರವರ್ತಿ ಅಶೋಕ. ಅವರು ಮಾಡಿದ ಪ್ಲಾನ್ ನಿಂದ ಎರಡು ದೊಡ್ಡ ಬಂಡೆ ಮತ್ತು ಒಂದು ಚಿಕ್ಕ ಬಂಡೆ ಚೂರಾಯಿತು ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸಹ ಕಮಲ ಅರಳಲು ಸಾಕಷ್ಟು ಕಾರ್ಯಗಳನ್ನು ನಾವು ಮಾಡಿದ್ದೇವೆ. ಇನ್ನು ಮುಂದೆ ಸಹ ಸಹಕಾರ ಕ್ಷೇತ್ರದ ಪ್ರಮುಖ ಸ್ಥಾನಗಳಿಗೆ ಬಿಜೆಪಿಯವರೇ ಆಯ್ಕೆಯಾಗಬೇಕು ಎಂಬ ನಿಟ್ಟಿನಲ್ಲಿ ನಾನು ಗುರಿಯನ್ನು ಹಾಕಿಕೊಂಡಿದ್ದೇನೆಂದರು.
ಮಂಡ್ಯದಲ್ಲಿ ಆಲೆಮನೆಗೆ ಆತ್ಮನಿರ್ಭರ ಯೋಜನೆ ಮೂಲಕ ಬಲ ತುಂಬುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ಪ್ರಯೋಜನ ದಕ್ಕುವಂತೆ ಮಾಡುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಪೌರಾಡಳಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಆಹಾರ ಸಚಿವ ಗೋಪಾಲಯ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.