ಹಿರೇಕೆರೂರು: ಪ್ರತಿ ತಿಂಗಳ ಮೂರನೇ ಶನಿವಾರ “ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ” ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಇದು ಜನರ ಸಂಕಷ್ಟಗಳ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಇಲ್ಲಿನ ಹಂಸಭಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಸಚಿವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿಗಳು ಸೂಟುಬೂಟು ಹಾಕಿ ಕೆಲಸ ಮಾಡಿದರೆ ಸಾಲದು. ಅವರಿಗೆ ಜನರ ಸಂಕಷ್ಟಗಳು ತಿಳಿಯಬೇಕು. ಜೊತೆಗೆ ತಕ್ಷಣ ಸ್ಪಂದನೆಗಳು ಸಿಗಬೇಕು. ಇದಕ್ಕೆ ಎಸಿ ಕಚೇರಿಯಲ್ಲಿ ಕುಳಿತರೆ ಆಗದು. ಹೀಗಾಗಿ ಅವರು ಹಳ್ಳಿಗಳಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಿತ ಹೋಗಿ ಜನರಿದ್ದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿದ್ದಾರೆಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ರೈತರು ಹಾಗೂ ಹಳ್ಳಿಗಾಡಿನ ಜನರಿಗಾಗಿ ಈ ಮಹತ್ವದ ನಿರ್ಧಾರ ಕೈಕೊಂಡಿದ್ದಾರೆಂದು ತಿಳಿಸಿದರು.
ಕೃಷಿ ಸಚಿವರ ಗ್ರಾಮ ವಾಸ್ತವ್ಯದ ಪರಿಣಾಮ ಪ್ರದೇಶವಾರು ರೈತರ ಸಮಸ್ಯೆ ತಿಳಿಯಲು ಸಾಧ್ಯವಾಗಿದೆ. ಇದೇ ಮಾದರಿಯಲ್ಲಿ ಜನರ ಸಮಸ್ಯೆ ನಿವಾರಣೆಗೆ ನಮ್ಮ ಸರ್ಕಾರ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮಗಳ ಕಡೆಗೆ ಕಾರ್ಯಕ್ರಮ ರೂಪಿಸಿದೆ. ಬರುವ ದಿನಗಳಲ್ಲಿ ಕಂದಾಯ ಸಚಿವರು ಸಹ ಗ್ರಾಮ ವಾಸ್ತವ್ಯ ಕೈಗೊಳ್ಳಲಿದ್ದು, ಸಚಿವರುಗಳ ಜನರಿಗೆ ಹತ್ತಿರವಾಗಲಿದ್ದಾರೆ. ಇದರಿಂದ ಜನರ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಹಾವೇರಿಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಸ್ಥಾಪನೆ ಬೇಡಿಕೆ ಈಡೇರಿಕೆ ಕುರಿತು ಶೀಘ್ರ ಸಭೆ ನಡೆಸಲಾಗುವುದು ಎಂದು ಸಚಿವ ಎಸ್.ಟಿ. ಸೋಮಶೇಖರ್ ಅವರು ಹೇಳಿದರು.
ಹಾಲು ಒಕ್ಕೂಟಗಳನ್ನೂ ಪ್ರತ್ಯೇಕ ಮಾಡಿದಲ್ಲಿ ಸ್ವತಂತ್ರವಾಗಿ ಜಿಲ್ಲಾಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡಲು ಅನುಕೂಲವಾಗಲಿದೆ. ಈ ಸಂಬಂಧ ಶೀಘ್ರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಹಂಸಭಾವಿ ಜಾನುವಾರು ಮಾರುಕಟ್ಟೆಯಲ್ಲಿ ಕೃಷಿ ಇಲಾಖೆ ಆಯೋಜಿಸಿದ ಕೃಷಿ ಸುಸ್ಥಿರ ಯೋಜನೆಯಡಿ ಹೈನುಗಾರಿಕೆ ಕೈಗೊಳ್ಳಲು 86 ಫಲಾನುಭವಿಗಳಿಗೆ ಹಸುಗಳನ್ನು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ವಿತರಿಸಿದರು.