–ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಅಸಂಖ್ಯಾತ ಭಕ್ತರಿಗೆ ಬದುಕಿನ ದಾರಿ ತೋರಿದ , ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ, ಕನ್ನಡ ಸಾಹಿತ್ಯಲೋಕಕ್ಕೆ ತಮ್ಮದೇ ಆದ ಸ್ಮರಣೀಯ ಸೇವೆ ಸಲ್ಲಿಸಿದ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಜಿನೈಕ್ಯರಾಗಿದ್ದಾರೆ.
ಇತಿಹಾಸ ತಜ್ಞರು, ತತ್ವ ಜ್ಞಾನಿಗಳು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶ್ರೀಗಳು 1949 ಮೇ 3ರಂದು ಕಾರ್ಕಳದ ವರಂಗ ಗ್ರಾಮದಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ರತ್ನವರ್ಮ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದಲ್ಲಿ ಎಂ.ಎ. ಮುಗಿಸಿದ್ದ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಶಸ್ತ್ರ ಶಾಸ್ತ್ರ ಜೊತೆಗೆ ಕನ್ನಡ, ಸಂಸ್ಕೃತ ಮತ್ತು ಪ್ರಾಕೃತದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರ ಜ್ಞಾನ ಕೇವಲ ಜೈನ ಧರ್ಮಶಾಸ್ತ್ರಕ್ಕೆ ಸೀಮಿತವಾಗಿರದೇ, ಇತಿಹಾಸ ತಜ್ಞರು, ತತ್ವ ಜ್ಞಾನಿಗಳು, ಶ್ರೇಷ್ಠವಾಗ್ಮಿಗಳು ಆಗಿದ್ದರು.
1970ರಲ್ಲಿ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠದ ಪೀಠವೇರಿದ್ದರು. ಪೀಠದಲ್ಲಿದ್ದುಕೊಂಡೇ ಮಠದ ಸಮಸ್ತ ಕಾರ್ಯನಿರ್ವಹಣೆಯೊಂದಿಗೆ ಸಂಶೋಧನೆ, ಗ್ರಂಥ ರಚನೆಯಲ್ಲಿ ಕ್ರಿಯಾಶೀಲರಾಗಿದ್ದ ಸ್ವಾಮೀಜಿಯವರ ಸರಳತೆ, ಸಜ್ಜನಿಕೆ, ಸಾಮಾಜಿಕ ಕಳಕಳಿ, ಲವಲವಿಕೆ, ಎಲ್ಲರಿಗೂ ಸ್ಪೂರ್ತಿಯಾಗಿತ್ತು. 1981ರಲ್ಲಿ ಗೋಮಟೇಶ್ವರ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದನ್ನು ಮೆಚ್ಚಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಶ್ರೀಗಳಿಗೆ ‘ಕರ್ಮಯೋಗಿ’ ಬಿರುದು ನೀಡಿ ಗೌರವಿಸಿದ್ದರು.
ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಏಳು ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದ್ದಾರೆ.
ಹೊಯ್ಸಳ ದೊರೆಯಾಗಿದ್ದ ಬಲ್ಲಾಳರಾಯ ಶ್ರವಣಬೆಳಗೊಳ ಜೈನ ಮಠದ ಸ್ವಾಮೀಜಿಗಳಿಗೆ 13ನೇ ಶತಮಾನದಲ್ಲಿ ‘ಚಾರುಕೀರ್ತಿ’ ಎಂಬ ಬಿರುದು ನೀಡುತ್ತಾನೆ ಎನ್ನುತ್ತದೆ ಇತಿಹಾಸ. ಅಂದಿನಿಂದಲೂ ಜೈನ ಮಠದ ಪೀಠಾಧಿಪತಿಗಳಿಗೆ ಚಾರುಕೀರ್ತಿ ಎಂದೇ ಕರೆಯಲಾಗುತ್ತದೆ.
620 ವರ್ಷಗಳ ಹಿಂದೆ ಕ್ಷೇತ್ರದ ಭಟ್ಟಾರಕರು 7 ಮಹಾಮಸ್ತಕಾಭಿಷೇಕ ನೆರವೇರಿಸಿದ್ದರು. ಅವರ ನಂತರ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 4 ಮಹಾಮಸ್ತಕಾಭಿಷೇಕವನ್ನು ಮುನ್ನಡೆಸಿದ್ದಾರೆ.
ಸುಮಾರು 40ಕ್ಕೂ ಅಧಿಕ ಜಿನಾಲಯಗಳನ್ನು ಜೀರ್ಣೋದ್ಧಾರಗೊಳಿಸಿ, ಅಲ್ಲಿ ನಿತ್ಯ ಪೂಜೆ ನಡೆಯುವಂತೆ ಮಾಡಿದ್ದಾರೆ. ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಸ್ವೀಕರಿಸಿ, ಅಲ್ಲಿ ಪ್ರಾಥಮಿಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಸಹಸ್ರಮಾನದ ಮಹಾಮಸ್ತಕಾಭಿಷೇಕದಲ್ಲಿ ಸಾವಿರ ಮಂದಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಸಿದ್ದರು.
ಎಸ್.ಡಿ. ಜೆ.ಎಂ.ಐ ಟ್ರಸ್ಟ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಕಾಲೇಜು ಶಿಕ್ಷಣದವರೆಗೆ ಅದನ್ನು ಕೊಂಡೊಯ್ಯದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ.
ಹಲವು ದೇಶಗಳಲ್ಲಿ ಜೈನ ಧರ್ಮ ಪ್ರಸಾರ ಮಾಡಿ ಅಹಿಂಸೆಯ ಸಂದೇಶ ಬಿತ್ತರಿಸಿರುವ ಸ್ವಾಮೀಜಿಗಳ ವಿಶೇಷತೆಯೆಂದರೆ, 2006ರಿಂದ ದೂರವಾಣಿಯಲ್ಲಿ ಅಥವಾ ಮೊಬೈಲ್ನಲ್ಲಿ ಮಾತನಾಡದಿರುವುದು. ಚಾತುರ್ಮಾಸಕ್ಕೆ ವಿಜಾಪುರಕ್ಕೆ ತೆರಳಿ ಮರಳಿದ ಬಳಿಕ, 2001ರಲ್ಲಿ , ಪ್ರಕೃತ ಭಾಷೆಯಲ್ಲಿ ಇರುವ ಜೈನ ಸಾಹಿತ್ಯವನ್ನು ಧವಲಾ, ಜಯಧವಲಾ, ಮಹಾಧವಲಾ ಗ್ರಂಥಗಳ 42 ಸಂಪುಟಗಳ ಕನ್ನಡ ಅನುವಾದ ಮಾಡಿಸಿ, ಅವುಗಳನ್ನು ಪ್ರಕಟಿಸಿ ಅವಿಸ್ಮರಣೀಯ ಕಾಯ೯ಕೈಗೊಂಡರು.
ಇದರ ಪ್ರಕಟಣೆ ವೇಳೆಯಲ್ಲಿ ಅವರು 12 ವರ್ಷ ಕಾಲ ವಾಹನ ಸಂಚಾರವನ್ನೇ ತ್ಯಜಿಸಿದ್ದರು.ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಪ್ರಾಕೃತ ಭಾಷೆಗೆ ಮರುಜೀವ ತುಂಬಿದರು.
ಪ್ರಾಕೃತ ವಿದ್ವಾಂಸರಿಗೆ- ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ, ಜೈನ ಸಾಹಿತ್ಯ ಸಂಸ್ಕೃತಿಗಳಿಗೆ- ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ,ಕನ್ನಡ ಜೈನ ಸಾಹಿತ್ಯ ಸೇವೆಗೆ- ಚಾವುಂಡರಾಯ ಪ್ರಶಸ್ತಿಗಳನ್ನು ಸ್ಥಾಪಿಸಿ,ವಿಶೇಷ ಸಾಧಕರಿಗೆ ಅವುಗಳನ್ನು ನೀಡಿ ಗೌರವಿಸುತ್ತ ಬರುತ್ತಿದ್ದರು.
ಪೂಜ್ಯ ಶ್ರೀಗಳ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರದಲ್ಲಿನ ಸೇವೆಗಾಗಿ ಕಮ೯ಯೋಗಿ, ಅಧ್ಯಾತ್ಮ ಯೋಗಿ,ಭಟ್ಟಾರಕ ಶಿರೋಮಣಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಗೆ 2017ನೇ ಸಾಲಿನಲ್ಲಿ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿತ್ತು.
ಶ್ರೀಗಳು 16ಕ್ಕೂ ಹೆಚ್ಚು ವಿದೇಶಗಳಲ್ಲಿ ಜರುಗಿದ ವಿಚಾರ ಸಂಕಿರಣ, ಧರ್ಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸರಳ ಶೈಲಿಯ ಪ್ರವಚನಗಳಿಂದ ಶ್ರಾವಕರ ಮನ ಗೆದ್ದಿದ್ದಾರೆ. ಶ್ರೀಗಳು ಜೈನ ಧರ್ಮ ಇಂದಿಗೂ ತನ್ನತನ ಉಳಿಸಿಕೊಂಡು ಬರುವುದಕ್ಕೆ ಪ್ರಮುಖ ಕಾರಣ ಜೈನ ತತ್ವಶಾಸ್ತ್ರ ಗ್ರಂಥಗಳು ಹಾಗೂ ಜೈನ ವಾಸ್ತುಶಿಲ್ಪ ಕಲೆ ಎಂಬುದನ್ನು ಅರಿತು ಬಸದಿಗಳ ಜೀಣೊ೯ದ್ದಾರ, ಜೈನ ಸಾಹಿತ್ಯ ಪ್ರಕಟಣೆಗೆ ವಿಶೇಷವಾಗಿ ಒತ್ತು ನೀಡಿದ್ದಾರೆ.ಅವುಗಳ ಸಂರಕ್ಷಣೆಗಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆರೋಗ್ಯ ಹಾಗೂ ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದ ಸ್ವಾಮೀಜಿ ಶಾಲೆ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜು, ನರ್ಸಿಂಗ್ ಕಾಲೇಜು, ಗೋಮಟೇಶ ವಿದ್ಯಾಪೀಠ ಹಾಗೂ ಪ್ರಾಕೃತದ ಪುಸ್ತಕಗಳು ಸಾಮಾನ್ಯ ಜನರಿಗೂ ಸಿಗುವಂತೆ ಮಾಡಲು ಬೆಂಗಳೂರಿನಲ್ಲಿ ‘ಪ್ರಾಕೃತ ಜ್ಞಾನಭಾರತಿ ಶಿಕ್ಷಣ ಟ್ರಸ್ಟ್’ ಸ್ಥಾಪನೆ ಮಾಡಿದ್ದಾರೆ. ಈ ಟ್ರಸ್ಟ್ ಪ್ರತಿ ಎರಡು ವರ್ಷಗಳಿಗೊಮ್ಮೆ ರಾಷ್ಟ್ರೀಯ ಪ್ರಾಕೃತ ಸಮ್ಮೇಳನಗಳನ್ನು ಆಯೋಜನೆ ಮಾಡುತ್ತದೆ.
ಆಯುರ್ವೇದ ಆಸ್ಪತ್ರೆ, ಸಂಬೂರಿ ಆಸ್ಪತ್ರೆ, ಕ್ಲಿನಿಕಲ್ ಲ್ಯಾಬ್ ಗಳನ್ನು ಸ್ಥಾಪಿಸಿರುವ ಸ್ವಾಮೀಜಿ ಮಸ್ತಕಾಭಿಷೇಕದಲ್ಲಿ ಉಳಿದ ಹಣದಿಂದ ಶ್ರೀ ಬಾಹುಬಲಿ ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದರು. ಅಲ್ಲದೇ ವೃದ್ಧಾಶ್ರಮಗಳಂಥ ಸಮಾಜಮುಖಿ ಹಾಗೂ ಇನ್ನೂ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸುತ್ತಾ ಈ ನಾಡಿನಲ್ಲಿ ಶಾಂತಿ ನೆಲೆಸಲು ಸತತ 50 ವಷ೯ಗಳ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಾ ಬಂದಿದ್ದಾರೆ.
ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಹಲವು ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸಲು ಸಂಚಾರಿ ಆಸ್ಪತ್ರೆ ವ್ಯವಸ್ಥೆ ಮಾಡಿದ್ದಾರೆ. ಶ್ರವಣಬೆಳಗೊಳದ ಸುತ್ತಮುತ್ತಲಿನ ಹತ್ತು ಗ್ರಾಮಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು ಶಾಲಾ ಕಟ್ಟಡ, ಕುಡಿಯುವ ನೀರು, ಸಮುದಾಯ ಭವನ, ರಸ್ತೆ ಮತ್ತು ಬೀದಿ ದೀಪಗಳ ವ್ಯವವಸ್ಥೆಯನ್ನು ಮಾಡಿದ್ದಾರೆ. ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳ ಮೇಲೆ ಹಿಡಿತ ಹೊಂದಿದ್ದ ಸ್ವಾಮೀಜಿಗಳು ಸರಳವಾಗಿ ಅರ್ಥವಾಗುವಂತೆ ಪ್ರವಚನ ನೀಡುತ್ತಿದ್ದರು.
ಭಗವಾನ್ ಮಹಾವೀರರ 2,500ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ದಕ್ಷಿಣ ಭಾರತದಾದ್ಯಂತ ‘ಧರ್ಮಚಕ್ರ’ ಎಂಬ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುವಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರಮುಖ ಪಾತ್ರವಹಿಸಿದ್ದರು.
ಶ್ರವಣ ಬೆಳಗೊಳ ಎಂದರೆ ವಿರಾಗಿ ಮೂರ್ತಿಯ ಜೊತೆ ನೆನಪಾಗುವ ಇನ್ನೋರ್ವ ಚೇತನ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು.
ಪೀಠಕ್ಕೆ ಬಂದು ಅರ್ಧ ಶತಮಾನವೇ ಆಗುತ್ತಿದ್ದರೂ ಅವರೆಂದು ನಕರಾತ್ಮಕ ಕಾರಣಕ್ಕೆ ಸುದ್ದಿಯಾದವರಲ್ಲ. ಯಾವುದೇ ಚರ್ಚೆ ಟೀಕೆಗೆ ಗುರಿಯಾದವರಲ್ಲ. ಟಿವಿ ಚರ್ಚೆಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. ಇವರು ಕಾಣಿಸುತ್ತಿದ್ದಿದ್ದು ಟಿವಿಯಲ್ಲಿ ಕೇವಲ ಮಹಾಮಸ್ತಾಕಾಭಿಷೇಕದಿಂದ ಮಾತ್ರ. ಸ್ವಾಮೀಜಿಯವರನ್ನು ನೋಡಲು ಮತ್ತೆ 12 ವರ್ಷಗಳೇ ಕಾಯಬೇಕಾಗಿರುತ್ತಿತ್ತು. ಎಲ್ಲವನ್ನೂ ಬಿಟ್ಟು ಸ್ವಾಮೀಜಿಯಾಗುವ ಕೆಲ ಸ್ವಾಮೀಜಿಗಳು ಪೀಠಕ್ಕೇರಿದ ನಂತರ ಎಲ್ಲವೂ ಬೇಕು ಎನ್ನಲು ಶುರು ಮಾಡುತ್ತಾರೆ. ಅಂತಹ ಸ್ವಾಮೀಜಿಗಳ ನಡುವೆ ಈ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತುಂಬಾ ಶ್ರೇಷ್ಠರಾಗಿ ಉಳಿಯುತ್ತಾರೆ.
ತಾವಾಯಿತು ತಮ್ಮ ಕೆಲಸವಾಯಿತು. ಪೂಜೆ, ಧಾರ್ಮಿಕ ಕಾರ್ಯಗಳ ಜೊತೆಗೆ ಮಾತುಕತೆ, ಅಧ್ಯಯನ, ಧಾರ್ಮಿಕ ಆಚರಣೆಗಳಲ್ಲಿ ಸ್ವಾಮೀಜಿ ಸದಾ ನಿರತರು. ‘ಸರಕಾರಗಳು ಮತ್ತು ಸಮಾಜ ಕೈಜೋಡಿಸಿದಾಗ ಮಾತ್ರ ಇಂಥ ಉತ್ಸವಗಳು ಯಶಸ್ವಿಯಾಗಲು ಸಾಧ್ಯ’ ಎಂಬ ಸರಳ ಸೌಜನ್ಯದ ನುಡಿ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರದಾಗಿತ್ತು.
ಜಾತಿ ಪಂಗಡ ಧರ್ಮಗಳ ಆಚೆ ಸಮಸ್ತರ ಗೌರವಾದರಗಳಿಗೆ ಪಾತ್ರರಾದ ಅಪರೂಪದ ಸಂತರಾಗಿದ್ದರು.