ಮಂಡ್ಯ: 2022ರಲ್ಲಿ ಮಂಡ್ಯದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಈಗ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದ್ದು,ತನ್ನ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ದ್ವೇಷದ ರಾಜಕೀಯಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಂಡ್ಯದ ಸಂಜಯ್ ವೃತ್ತದಲ್ಲಿ 2022ರ ಡಿಸೆಂಬರ್ 17 ರಂದು ಅಂದಿನ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು.
ಈ ವೇಳೆ ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು, ಘೋಷಣೆ ಕೂಗುವ ಭರದಲ್ಲಿ ಪಾಕಿಸ್ತಾನ ಮುರ್ದಾಬಾದ್ ಎಂದು ಹೇಳುವ ಬದಲು ಬಿಜೆಪಿ ಕಾರ್ಯಕರ್ತ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ, ಕೂಡಲೇ ಎಚ್ಚೆತ್ತ ಕಾರ್ಯಕರ್ತರೊಬ್ಬರು ಘೋಷಣೆ ಕೂಗಿದ ಕಾರ್ಯಕರ್ತನ ಬಾಯಿ ಮುಚ್ಚಿಸಿದ್ದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕೈ ಕಾರ್ಯಕರ್ತರು ಬಂಧನಕ್ಕೆ ಒಳಗಾದ ಬೆನ್ನಲ್ಲೇ ಈಗ ಕಾಂಗ್ರೆಸ್ ಮಂಡ್ಯದ ಬಿಜೆಪಿ ಕಾರ್ಯಕರ್ತರ ಮೇಲೆ ದೂರು ನೀಡಿದೆ.
ಕನ್ನಂಬಾಡಿ ಕುಮಾರ್ ದೂರು ನೀಡಿದ್ದು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರಾಧ್ಯ, ರವಿ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಪೊಲೀಸರು ಬಿಜೆಪಿ ಕಾರ್ಯಕರ್ತ ರವಿಯನ್ನು ವಶಕ್ಕೆ ಪಡೆದಿದ್ದಾರೆ.