ಜೀವನದಿ ಕಾವೇರಿ ಸ್ವಚ್ಛತಾ ಕಾರ್ಯಕ್ರಮ

ಶ್ರೀರಂಗಪಟ್ಟಣ: ಕೊಡಗಿನ ಕಾವೇರಿ ನದಿ ನಾಡಿನ ಲಕ್ಷಾಂತರ ಜನರ ಜೀವನಾಡಿಯಾಗಿದೆ,ಆದರೆ ಇತ್ತೀಚಿನ ದಿನಗಳಲ್ಲಿ ಈ ನದಿಯ ನೀರು ಕಲುಷಿತಗೊಳ್ಳುತ್ತಿದೆ.

ಇದಕ್ಕೆ ಕಾರಣ ಹಲವು ಕೋಳಿ ಮತ್ತು ಕುರಿ ಮಾಂಸದ ಅಂಗಡಿಗಳ ಮಾಲೀಕರು ಕುರಿ, ಕೋಳಿ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಸಿ ನದಿಗೆ ಎಸೆಯುತ್ತಿರುವುದು.

ಎಷ್ಟೋ ಜನರು ಯಾವುದೊ ಮಾಟ ಮಂತ್ರಗಳನ್ನು ಮಾಡಿದ ತ್ಯಾಜ್ಯವನ್ನು ಇದೇ ಹೊಳೆಗೆ ಸುರಿಯುತ್ತಿದ್ದಾರೆ. ಜತೆಗೆ ಯಾವುದೇ ವಸ್ತು ಬೇಡ ಎನಿಸಿದರೆ ತಕ್ಷಣ ಜನರು ತಮ್ಮ ವಾಹನಗಳಲ್ಲಿ ತಂದು ಸೇತುವೆ ಮೇಲೆ ನಿಂತು ಕಾವೇರಿ ನದಿಗೆ ಸುರಿದು ಹೋಗುತ್ತಾರೆ.

ಕಾವೇರಿ ನದಿಯ ಮಲಿನತೆ ಹೋಗಲಾಡಿಸಲು ಮುಂದಾಗಿರುವ ಯುವ ಬ್ರಿಗೇಡ್ ಸದಸ್ಯರೊಂದಿಗೆ ಶ್ರೀರಂಗಪಟ್ಟಣದ ಸ್ವಯಂಸೇವಕರು ಕೂಡ ಕೈ ಜೋಡಿಸಿದರು.

ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ಬಂದವರಿಗೆ ವಸತಿ, ಊಟದ ಸೌಕರ್ಯ ಅಗತ್ಯ ಸಲಕರಣೆಗಳನ್ನು ಶ್ರೀರಂಗಪಟ್ಟಣದ ಜನತೆ ಕಲ್ಪಿಸಿಕೊಟಿತು.

ಇಂತಹ ಸಮಾಜಮುಖಿ ಕಾರ್ಯಗಳನ್ನು ಯಾರು, ಎಲ್ಲಿ ಮಾಡಿದರೂ ಶ್ರೀರಂಗಪಟ್ಟಣದ ಸ್ವಯಂಸೇವಕರು ಕೈ ಜೋಡಿಸಲಿದ್ದೇವೆ ಎಂದು ರಾಷ್ಟ್ರೀಯ ಸ್ವಯಂಸೇವಕರು ಮತ್ತು ಸ್ವಯಂ ಪ್ರೇರಿತವಾಗಿ ಬಂದ ಸ್ವಯಂಸೇವಕರು ಹೇಳಿದ್ದಾರೆ.

ಒಟ್ಟಿನಲ್ಲಿ ಕಸದಿಂದ ತುಂಬಿದ್ದ ಕಾವೇರಿ ನದಿ ಈಗಲಾದರೂ ಸ್ವಚ್ಛವಾಗುತ್ತಿದೆ ಎನ್ನುವುದೇ ಸಮಾಧಾನಕರ ಸಂಗತಿ.

ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಯುವಬ್ರಿಗೇಡ್ ಸ್ವಯಂ ಸೇವಕರು ನದಿ ಸ್ವಚ್ಛ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಘನೀಯ.

ಇನ್ನು ಮುಂದಾದರೂ ತೀರ್ಥ ಕ್ಷೇತ್ರಗಳಿಗೆ ತೆರಳುವ ಜನರು ಸ್ವಚ್ಛತೆ ಕಾಪಾಡಿ‌ ಕಾವೇರಿ ನದಿಯ ನೀರನ್ನು ಸ್ವಚ್ಛವಾಗಿಟ್ಟರೆ ಎಲ್ಲರಿಗೂ ಅನುಕೂಲವಾಗಲಿದೆ.