ಹಾಸನ: ಜಿಲ್ಲೆಯಲ್ಲಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಸಚಿವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಡಾನೆ ಸಮಸ್ಯೆ ಗೆ ಪರಿಹಾರ ಒದಗಿಸಲು ಫೆ. 16ರಂದು ಸಕಲೇಶಪುರ ಪಟ್ಟಣದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಸಭೆಗೆ ಆನೆ ಹಾವಳಿಗೆ ತುತ್ತಾದ ಬೆಳೆಗಾರರನ್ನು ಹಾಗೂ ಗ್ರಾಮಸ್ಥರನ್ನು ಆಹ್ವಾನಿಸಲಾಗಿದೆ ಇಲ್ಲಿ ಅವರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಪುಂಡಾನೆ ಸೆರೆ ಸೇರಿದಂತೆ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು ಕಾರಿಡಾರ್ ನಿರ್ಮಾಣಕ್ಕೆ ಸಭೆಯಲ್ಲಿ ಜನರಿಂದ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅಲ್ಲದೇ ಈ ಬಾರಿಯ ಕೇಂದ್ರ ಬಜೆಟ್ ಅಲ್ಲಿ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ ಎಂದ ಅವರು ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಮಾರ್ಗದ ಸಕಲೇಶಪುರ ಹೊರಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಈ ನಡುವೆ ಸಂಚಾರಿ ಯೊಗ್ಯವಾಗಿ ಮಾಡಲು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಈ ತಿಂಗಳು 28ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದರು.
ಶಾಸಕ ಪ್ರೀತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಕೆ. ಸುರೇಶ್, ಮಾಜಿ ಶಾಸಕ ಬಿ.ಆರ್. ಗುರುದೇವ್, ನಿಜಗುಣ ರಾಜ್, ವಿಜಯ್ ಸುದ್ದಿಗೋಷ್ಠಿಯಲ್ಲಿ ಇದ್ದರು.