ಕನ್ನಡ ಚಿತ್ರಗಳಿಗೆ 5 ರಾಷ್ಟ್ರೀಯ ಪ್ರಶಸ್ತಿಗಳ ಗರಿ

ಬೆಂಗಳೂರು: 2020 ನೇ ಸಾಲಿನ 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು ಕನ್ನಡ ಚಿತ್ರಗಳಿಗೆ ಐದು ಪ್ರಶಸ್ತಿಗಳು ಸಿಕ್ಕಿವೆ.

ಬಾಲಿವುಡ್ ನ ಹೆಸರಾಂತ ನಿರ್ದೇಶಕ ವಿಪುಲ್ ಶಾ ನೇತೃತ್ವದ ಸಮಿತಿ ಆಯ್ಕೆಮಾಡಿ ಅಂತಮಗೊಳಿಸಿದ್ದ ಪ್ರಶಸ್ತಿಗಳ ಪಟ್ಡಿಯನ್ನು   ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಅನುರಾಗ್ ಠಾಕೂರ್‌ಗೆ ಸಲ್ಲಿಸಲಾಗಿದೆ.

ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಆರ್. ಗೋಪಿನಾಥ್ ಅವರ ಜೀವನವನ್ನಾಧರಿಸಿದ  ಸೂರರೈ ಪೊಟು  ಚಿತ್ರದ ಅಭಿನಯಕ್ಕಾಗಿ ತಮಿಳು ನಟ ಸೂರ್ಯ ಮತ್ತು ತಾನಾಜಿ  ಚಿತ್ರದ ಅಭಿನಯಕ್ಕಾಗಿ ಅಜಯ್ ದೇವಗನ್  2020 ನೇ ಸಾಲಿನ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕನ್ನಡಕ್ಕೆ ಐದು ಪ್ರಶಸ್ತಿ ಸಿಕ್ಕಿದ್ದು , ಫೀಚರ್ ಫಿಲಂ ವಿಭಾಗದಲ್ಲಿ ನಾಲ್ಕು ಮತ್ತು ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಒಂದು ಪ್ರಶಸ್ತಿ ಸಿಕ್ಕಿವೆ.

ಪುರಾಣಿಕ್ ನಿರ್ದೇಶನದ ಕನ್ನಡದ  ಡೊಳ್ಳು  ಹಾಗೂ ತುಳು ಭಾಷೆಯ ಜೀಟಿಗೆ  ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗಳು ಬಂದಿವೆ.

ಸಂಚಾರಿ ವಿಜಯ್ ಅಭಿನಯದ ತಲೆದಂಡ  ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಮತ್ತು ಸಂರಕ್ಷಣೆ ಚಿತ್ರ ಎಂಬ ಪ್ರಶಸ್ತಿ ಲಭ್ಯವಾಗಿದೆ.

ಜೋಬಿನ್ ಜಯನ್ ಅವರು ಡೊಳ್ಳು  ಚಿತ್ರಕ್ಕಾಗಿ ಅತ್ಯುತ್ತಮ ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್ ಪ್ರಶಸ್ತಿ ಗೆದ್ದಿದ್ದಾರೆ.

ತಮಿಳಿನ  ಸೂರರೈ ಪೊಟ್ರು , ಹಿಂದಿಯ  ತಾನಾಜಿ  ಮತ್ತು ಮಲಯಾಳಂನ  ಅಯ್ಯಪ್ಪನುಂ ಕೋಶಿಯುಂ  ಚಿತ್ರಗಳು ಅತೀ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.

ಸೂರ‌ರೈ ಪೊಟ್ರು ಅತ್ಯುತ್ತಮ  ಚಿತ್ರ,ಅತ್ಯುತ್ತಮ ನಟಿ ( ಅಪರ್ಣ ಬಾಲಮುರಳಿ ), ಅತ್ಯುತ್ತಮ ಚಿತ್ರಕಥೆ ( ಸುಧಾ ಕೊಂಗರಾ ಮತ್ತು ಶಾಲಿನಿ ಉಷಾ ನಾಯರ್ ) ಅತ್ಯುತ್ತಮ ಹಿನ್ನೆಲೆ ಸಂಗೀತ ( ಜಿ.ವಿ. ಪ್ರಕಾಶ್ ಕುಮಾರ್ ) ಪ್ರಶಸ್ತಿಗಳು ಸಿಕ್ಕಿವೆ.

ತಾನಾಜಿ ದಿ ಅನ್ವಂಗ್ ವಾರಿಯರ್ ಚಿತ್ರವು ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಎಂಬ ಪ್ರಶಸ್ತಿ ಪಡೆಯುವುದರ ಜತೆಗೆ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ( ನಚಿಕೇತ್ ಭಾರ್ವೆ ಮತ್ತು ಮಹೇಶ್ ಶೇರಾ ) ಪ್ರಶಸ್ತಿ ಪಡೆದಿದೆ.

ಮಲಯಾಳಂನ ಅಯ್ಯಪ್ಪನುಂ ಕೋಶಿಯುಂ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ( ಸಚ್ಚಿದಾನಂದನ್ ಕೆ.ಆರ್ ),ಪೋಷಕ ನಟ ( ಬಿಜು ಮೆನನ್ ) ಮತ್ತು ನಂಜಿಯಮ್ಮ ( ಅತ್ಯುತ್ತಮ ಹಿನ್ನೆಲೆ ಗಾಯಕಿ ) ಸೇರಿದಂತೆ ಮೂರು ಪ್ರಶಸ್ತಿಗಳು ಸಿಕ್ಕಿವೆ.

ಗಿರೀಶ ಕಾಸರವಳ್ಳಿ ಅವರ ನಾದದ ನವನೀತ ಡಾ.ಪಂಡಿತ್ ವೆಂಕಟೇಶ್ ಕುಮಾರ್ ಎಂಬ ಸಾಕ್ಷ ಚಿತ್ರ ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ನಿರ್ಮಿಸಿರುವ ಚಿತ್ರ ಇದಾಗಿದ್ದು ರಜತ ಕಮಲ ಪ್ರಶಸ್ತಿ ದೊರಕಿದೆ.

ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿ ಕನ್ನಡಿಗರಾದ ರಂಗಕರ್ಮಿ ಮತ್ತು ನಟ ನಾಗರಾಜ್ ಕೋಟೆ ಛಾಯಾಗ್ರಹಕ ಮಂಜುನಾಥ್ ಮತ್ತೊಬ್ಬ ಛಾಯಾಗ್ರಾಹಕ ಭಾಸ್ಕರ್ ಇದ್ದರು.

2020 ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ 30 ಭಾಷೆಗಳ ಒಟ್ಟು 300 ಕ್ಕೂ ಹೆಚ್ಚು ಚಿತ್ರಗಳು ಫೀಚರ್ ಮತ್ತು ನಾನ್  ಫೀಚರ್ ವಿಭಾಗಗಳಲ್ಲಿ ಸ್ಪರ್ಧಿಸಿದ್ದವು.