ಕಾಂತಾರ ಚಿತ್ರದ ನಟನೆಗೆ ರಿಶಬ್ ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ

ನವದೆಹಲಿ: ಕಾಂತಾರ ಚಲನಚಿತ್ರದ ಅದ್ಭುತ ನಟನೆಗೆ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ‘ಕೆಜಿಎಫ್ 2’ಗೆ ಸಿಕ್ಕಿದೆ.

2014 ರ ನಂತರ ಇದೀಗ ಕನ್ನಡ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ.

ಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕವೇ ಕಳೆದು ಹೋಗಿತ್ತು.

ಶುಕ್ರವಾರ ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ

70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಹೆಸರನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಘೋಷಿಸಿದೆ.

ಕನ್ನಡದ ಡಿವೈನ್‌ ಸ್ಟಾರ್‌ ರಿಷಬ್ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವುದು ಎಲ್ಲ ಕನ್ನಡಿಗರ ಹೆಮ್ಮೆ.

ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಒಳಗೊಂಡಂತೆ ರಾಷ್ಟ್ರ ಪ್ರಶಸ್ತಿ ವಿಜೇತರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ 2024 ರಂದು ನಡೆಯಲಿರುವ ಸಮಾರಂಭದಲ್ಲಿ ಗೌರವಿಸಲಿದ್ದಾರೆ.

ರಿಷಬ್ ಶೆಟ್ಟಿ ಅವರಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಸೇರಿದಂತೆ ಹಲವು ನಟರು ಸ್ಪರ್ಧೆಯೊಡ್ಡಿದ್ದರು, ಆದರೆ ರಾಷ್ಟ್ರ ಪ್ರಶಸ್ತಿ ರಿಷಬ್ ಶೆಟ್ಟಿ ಮುಡಿಗೇರಿದೆ.

1975 ರಲ್ಲಿ ಎಂ ವಿ ವಾಸುದೇವ ಅವರು ಚೋಮನ ದುಡಿ ಸಿನಿಮಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

1986 ರಲ್ಲಿ ಕಮಲ್‌ ಹಾಸನ್‌ ಅವರ ಸಹೋದರ ಚಾರುಹಾಸನ್ ಅವರು ತಬರನ ಕಥೆ ಸಿನಿಮಾಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು.

2014 ರಲ್ಲಿ ನಾನು ಅವನಲ್ಲ-ಅವಳು ಕನ್ನಡ ಚಲನಚಿತ್ರದಲ್ಲಿ ತೃತೀಯಲಿಂಗಿ ವ್ಯಕ್ತಿಯ ಪಾತ್ರಕ್ಕಾಗಿ ಸಂಚಾರಿ ವಿಜಯ್ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು.

ದಶಕದ ಬಳಿಕ ಈಗ ರಿಷಬ್‌ ಶೆಟ್ಟಿ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗುತ್ತಿರುವುದು ಅವರ ನಟನೆಗೆ‌ ಸಂದ‌ ಗೌರವವಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿರುವ ರಿಶಬ್‌ ಅವರು ಕಾಂತಾರ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ತಿಳಿದು‌ ತುಂಬಾ ಖುಷಿಯಾಗಿದೆ,ನಾನು ಶಕ್ತಿ ಮೀರಿ ನಟಿಸಲು ಪ್ರೋತ್ಸಾಹ ಸಿಕ್ಕಿದಂತಾಗಿದೆ ಎಂದು ಹೇಳಿದರು.

ಈ ಪ್ರಶಸ್ತಿ ‌ಬರಲು ಕಾರಣರಾದ‌ ಎಲ್ಲರಿಗೂ ಧನ್ಯವಾದ‌ ಸಲ್ಲಿಸುತ್ತೇನೆ ಎಂದು ಹೃದಯ ಪೂರ್ವಕವಾಗಿ ತಿಳಿಸಿದರು.

ಎಲ್ಲರಿಗೂ ಧನ್ಯವಾದಗಳು, ನಾನು ನಟನಾಗಿ, ನಿರ್ದೇಶಕನಾಗಿ ಈ ಯಶಸ್ಸನ್ನು ಅಪ್ಪು ಹಾಗೂ ದೈವ ನರ್ತಕರಿಗೆ ಅರ್ಪಿಸುತ್ತೇನೆ ಎಂದು ಕೂಡಾ ಹೇಳಿದ್ದಾರೆ ಜತೆಗೆ ಕನ್ನಡ ಜನತೆಗೂ ಈ ಪ್ರಶಸ್ತಿ ಸಮರ್ಪಿಸುತ್ತಿದ್ದೇನೆ ಎಂದು ತಿಳಿಸಿದ್ದರೆ.

ಕಾಂತಾರ ಚಿತ್ರಕ್ಕೆ ಬರೀ ಅತ್ಯುತ್ತಮ ನಟ ಪ್ರಶಸ್ತಿ ಮಾತ್ರವಲ್ಲದೆ, ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಪ್ರಶಸ್ತಿ ಪಡೆದಿದೆ.