ಬಾಗೇಪಲ್ಲಿ: ರಾಜ್ಯದ ಗಡಿ ಪ್ರದೇಶದಲ್ಲಿ ಹಸು, ದನ-ಕರುಗಳ ಹತ್ಯೆ ಅವ್ಯಾಹತವಾಗಿ ನಡೆದಿದೆ ಎಂಬುದಕ್ಕೆ ಇಂಬು ನೀಡುವಂತೆ ಸತ್ತ ಪ್ರಾಣಿಗಳ ಭಾಗಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವೊಂದು ಬೆಳಕಿಗೆ ಬಂದಿದೆ.
ಕಸಬಾ ಹೋಬಳಿಯ ಪೊತೇಪಲ್ಲಿಗೆ ಹಾದುಹೋಗುವ ಮುಖ್ಯರಸ್ತೆಯ ಜಿಲಾಜಿರ್ಲ ರಸ್ತೆಯ ತಿರುವಿನಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆ 8 ಗಂಟೆಯವರೆಗೂ ಸತ್ತ ಪ್ರಾಣಿಗಳ ಕೊಂಬುಗಳನ್ನು ಹಾಗೂ ಎಲುಬುಗಳನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಲಾಗಿದೆ.
ಬಾಗೇಪಲ್ಲಿ ಸುತ್ತಮುತ್ತ ಅಥವಾ ಕರ್ನಾಟಕ-ಆಂಧ್ರ ಪ್ರದೇಶ ಗಡಿಭಾಗದಲ್ಲಿ ಗೋ ಹತ್ಯೆ ನಡೆಯುತ್ತಿದೆಯಾ ಎಂಬ ಅನುಮಾನ ಉಂಟು ಮಾಡಿದೆ
ಮಂಗಳವಾರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಯುಪಿ. 12 ಎಟಿ 6515 ಸಂಖ್ಯೆಯ ಬೃಹತ್ ಕ0ಟೇನರ್ ಲಾರಿ ಒಂದಕ್ಕೆ ಸತ್ತ ಪ್ರಾಣಿಗಳ ಎಲುಬು, ಕೊಂಬುಗಳನ್ನು ಚೀಲಗಳಲ್ಲಿ ತುಂಬಿ ಲೋಡ್ ಮಾಡಲಾಗುತ್ತಿತ್ತು.
ಈ ಲಾರಿಗೆ ಬಾಗೇಪಲ್ಲಿ ಹಾಗೂ ಆಂಧ್ರದ ಕಡೆಯಿಂದ ಹಲವು ಚಿಕ್ಕ ಚಿಕ್ಕ ವಾಹನಗಳಲ್ಲಿ ಕೊಂಬುಗಳನ್ನು ರವಾನೆ ಮಾಡಿ ಇಲ್ಲಿಗೆ ತಂದು ಲೋಡ್ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ ತಾಲೂಕು ಬಿಜೆಪಿ ಮುಖಂಡರು ಹಾಗೂ ಡಿಎಸ್ಎಸ್. ತಂಡಗಳು ದಾಳಿ ನಡೆಸಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಸ್ಥಳಕ್ಕೆ ಧಾವಿಸಿದ ಪೋಲಿಸರು ಮೂರು ವಾಹನಗಳನ್ನು ವಶಕ್ಕೆ ಪಡೆದು ಚಾಲಕರನ್ನು ಬಂಧಿಸಿದ್ದಾರೆ.
ಬೊಲೋರೋ ವಾಹನ ಮತ್ತು ಕ್ಯಾಂಟರ್ ವಾಹನವನ್ನು. ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಮಾರು 70ರಿಂದ 80 ಟನ್ ತೂಕದ ಪ್ರಾಣಿಗಳ ಎಲುಬು ಹಾಗೂ ಕೊಂಬುಗಳ ಬೆಲೆ ಸದ್ಯದ ಮುಕ್ತ ಮಾರುಕಟ್ಟೆಯಲ್ಲಿ ಸುಮಾರು 50 ಕೋಟಿ ರೂ.ಗಳಿಗೂ ಹೆಚ್ಚಿದ್ದು, ಪ್ರಾಣಿಗಳ ಕೊಂಬು-ಎಲುಬುಗಳು ಇಲ್ಲಿಗೆ ಎಲ್ಲಿಂದ ಬಂದವು ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಲ್ಲದೆ, ಇಲ್ಲಿಂದ ಕೇರಳಕ್ಕೆ ಸಾಗಣೆಯಾಗಿ, ಅಲ್ಲಿಂದ ಹೊರದೇಶಕ್ಕೆ ಹೋಗುತ್ತಿವೆ ಎಂದು ಶಂಕಿಸಲಾಗಿದೆ.
ನಮ್ಮ ದೇಶ ಗೋಮಾತೆಯನ್ನು ಪೂಜಿಸುವ ದೇಶವಾಗಿದ್ದು, ಅದರಲ್ಲೂ ಅಕ್ರಮವಾಗಿ ಪ್ರಾಣಿಗಳ ಎಲುಬು ಹಾಗೂ ಕೊಂಬುಗಳನ್ನು ಮೂಟೆಗಳಲ್ಲಿ ತುಂಬಿ ರವಾನೆ ಮಾಡುತ್ತಿರುವುದು ನೋವಿನ ಸಂಗತಿ. ಈ ಕೊಂಬುಗಳು ಸುಮಾರು 80 ಟನ್ ತೂಕವಿವೆ ಎಂದು ಅಂದಾಜಿಸಲಾಗಿದ್ದು, ಇಷ್ಟು ಕೊಂಬುಗಳನ್ನು ಸಂಗ್ರಹಿಸಲು ಸುಮಾರು 5,000 ದಿಂದ 10,000 ಪ್ರಾಣಿಗಳನ್ನು ಕೊಲ್ಲಲಾಗಿರುತ್ತದೆ. ಇದು ನಿಜಕ್ಕೂ ಹೃದಯವಿದ್ರಾವಕ ದೃಶ್ಯವಾಗಿದ್ದು, ಈ ಕ0ಟೈನರ್ʼನಲ್ಲಿನ ಮೂಲೆಗಳಿಂದ ವಾಸನೆ ಬಾರದಂತೆ, ಒಳಗಡೇ ವ್ಯವಸ್ಥೆ ಕೂಡ ಕಲ್ಪಿಸಲಾಗಿದ್ದು, ಇದು ಯೋಜನಾಬದ್ಧವಾದ ಕಳ್ಳ ವ್ಯಾಪಾರವಾಗಿದೆ’ ಎಂದು ತಾಲೂಕಿನ ಬಿಜೆಪಿ ಮುಖಂಡ ಹಾಗೂ ಡಿಎಸ್ಎಸ್ ನಾಯಕ ರಾಮಪ್ಪ ತಿಳಿಸಿದರು.