ಕಾರಾಗೃಹದಲ್ಲಿ ಖೈದಿ ಸಾವು

ಚಾಮರಾಜನಗರ:‌ ಪತ್ನಿ ಕೊಂದು ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಯೊಬ್ಬ ಚಾಮರಾಜನಗರ ಜಿಲ್ಲಾ ಕಾರಾಗೃಹದ ಮೊದಲನೆ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ.

ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದ ಮಂಜು  ಎಂಬ ಕೈದಿ ಸಾವನ್ನಪ್ಪಿದ ದುರ್ದೈವಿ.

ಶನಿವಾರ ಬೆಳಗ್ಗೆ ಜೈಲಿನ ಮೊದಲನೆ ಮಹಡಿಯ ಮೆಟ್ಟಿಲುಗಳಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ತಕ್ಷಣ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಕೈದಿ ಮಂಜು ಆಯತಪ್ಪಿ ಬಿದ್ದಿರಬಹುದಾ ಅಥವಾ ಆತ್ಮಹತ್ಯೆ ಮಾಡಿಕೊಂಡಿರಬಹುದ ಎಂಬುದರ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.

ಚಾಮರಾಜನಗರ ಮೆಡಿಕಲ್ ಆಸ್ಪತ್ರೆಯಲ್ಲಿ ಮೃತದೇಹ ಇಡಲಾಗಿದೆ. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

18 ವರ್ಷಗಳ ಹಿಂದೆ ಉತ್ತುವಳ್ಳಿ ಗ್ರಾಮದ ಚಿನ್ನತಾಯಮ್ಮ ಎಂಬಾಕೆಯನ್ನು ಮಂಜು ವಿವಾಹವಾಗಿದ್ದ.ಸಂಸಾರಚೆನ್ನಾಗಿಯೇ ಸಾಗಿತ್ತು. ಆದರೆ, ಕಳೆದ 5-6 ವರ್ಷಗಳಿಂದ ಮದ್ಯವ್ಯಸನಿಯಾಗಿದ್ದ.

ಪ್ರತಿ ದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಅದೇ ರೀತಿ, 2017 ರ ಅಕ್ಟೋಬರ್ 26 ರಂದು ಮಧ್ಯರಾತ್ರಿ ದಂಪತಿ ನಡುವೆ ಜಗಳ ಪ್ರಾರಂಭವಾಗಿದ್ದು ತಾರಕಕ್ಕೇರಿದೆ. ಆ ಸಂದರ್ಭದಲ್ಲಿ ಮಂಜು ಪತ್ನಿ ಚಿನ್ನತಾಯಮ್ಮಳ ತಲೆಗೆ ಮರದ ಪಟ್ಟಿಯಿಂದ ಹೊಡೆದು, ಜುಟ್ಟು ಹಿಡಿದು ಗೋಡೆಗೆ ಗುದ್ದಿಸಿ ಕೊಲೆ ಮಾಡಿದ್ದ.

ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದು ರಾತ್ರಿ ಅಪ್ಪ – ಅಮ್ಮನ ನಡುವೆ ನಡೆದ ಗಲಾಟೆಯನ್ನು ಸಂಪೂರ್ಣ ಕಂಡಿದ್ದ ಮಗ ಕೊಲೆ ಮಾಡಿದ್ದು ಹೇಗೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಿದ್ದ.ಹಾಗಾಗಿ ಕೊಲೆ ಸಾಬೀತಾದುದರಿಂದ ಅಪರಾಧಿಗೆ ಶಿಕ್ಷೆ ವಿಧಿಸಲಾಗಿತ್ತು.

ಸರ್ಕಾರದ ಪರವಾಗಿ ವಕೀಲೆ ಉಷಾ ವಾದ ಮಂಡಿಸಿದ್ದರು.