ಕೆಎಸ್‍ಆರ್‍ಟಿಸಿ,ವಿದ್ಯುತ್ ನೌಕರರ ವೇತನ ಪರಿಷ್ಕರಣೆ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರು(ಕೆಎಸ್‍ಆರ್‍ಟಿ) ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ವೇತನ ಪರಿಷ್ಕರಣೆಗೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗ್ರೀನ್ ಸಿಗ್ನಲ್‌ ನೀಡಿದ್ದಾರೆ.

ಈಗಿನಿಂದಲೇ ಜಾರಿಯಾಗುವಂತೆ ಕೆಎಸ್‍ಆರ್‍ಟಿಸಿ ನೌಕರರ ಶೇ.15ರಷ್ಟು ಹಾಗೂ ಕೆಪಿಟಿಸಿಎಲ್ ನೌಕರರ ಶೇ.20ರಷ್ಟು ವೇತನವನ್ನು ಪರಿಷ್ಕರಣೆ ಮಾಡಲು ಸಿಎಂ ಒಪ್ಪಿಗೆ ನೀಡಿದ್ದು ಎರಡೂ ಇಲಾಖೆಯ ನೌಕರರಿಗೆ ಯುಗಾದಿ ಹಬ್ಬದ ಉಡುಗೊರೆ ಸಿಕ್ಕಿದಂತಾಗಿದೆ.

ಈ ಬಗ್ಗೆ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಳೆದ ಎರಡುಮೂರು ವರ್ಷಗಳಿಂದ ಸಾರಿಗೆ ನೌಕರರು ತಮ್ಮ ವೇತನವನ್ನು ಪರಿಷ್ಕರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನಿಗಮದ ಎಲ್ಲ ವ್ಯವಸ್ಥಾಪಕ ನಿರ್ದೇಶಕರು,ಕಾರ್ಮಿಕ ಮುಖಂಡರ ಜೊತೆ ಚರ್ಚೆ ನಡೆಸಿ ಶೇ.15ರಷ್ಟು ವೇತನ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೆಪಿಟಿಸಿಎಲ್ ನೌಕರರ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ಶೇ.20ರಷ್ಟು ಪರಿಷ್ಕರಣೆ ಮಾಡಲಾಗಿದ್ದು, ಪ್ರತಿಭಟನೆಯನ್ನು ನಡೆಸಬಾರದು ಎಂದು ಸಿಎಂ ಮನವಿ ಮಾಡಿದರು.

ನೆರೆಯ ಮಹಾರಾಷ್ಟ್ರ ಸರ್ಕಾರ ಗಡಿಭಾಗದಲ್ಲಿ ಕನ್ನಡಿಗರಿಗೆ ಆರೋಗ್ಯ ವಿಮೆ ಜಾರಿ ಮಾಡಿರುವುದಕ್ಕೆ ಸಿಎಂ ಬೊಮ್ಮಾಯಿ ಇದೇ ವೇಳೆ ಕಿಡಿಕಾರಿದರು.

ಎರಡೂ ರಾಜ್ಯಗಳು ಸುಪ್ರೀಂಕೋರ್ಟ್ ತೀರ್ಪು ಬರುವರೆಗೂ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಬಾರದು ಎಂದು ಖುದ್ದು ಕೇಂದ್ರ ಗೃಹಸಚಿವ ಅಮಿತ್ ಷಾ ಅವರೇ ಸೂಚನೆ ಕೊಟ್ಟಿದ್ದರು.

ಆದರೂ ಮಹಾರಾಷ್ಟ್ರದ ಸಚಿವ ಸಂಪುಟ ಗಡಿಭಾಗದ ಜನರಿಗೆ ಆರೋಗ್ಯ ವಿಮೆ ಮಾಡಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಜೊತೆ ನಾನು ಮಾತುಕತೆ ನಡೆಸುತ್ತೇನೆ. ತಕ್ಷಣವೇ ಸಚಿವ ಸಂಪುಟದ ನಿರ್ಣಯವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿ ನಮ್ಮ ವಿರೋಧವನ್ನು ಸಹ ತಿಳಿಸುತ್ತೇನೆ ಎಂದು ಸಿಎಂ ತಿಳಿಸಿದರು.

ಟೋಲ್ ಸಂಗ್ರಹಣೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಕಾರಿಗಳು ಸೂಕ್ತವಾದ ತೀರ್ಮಾನ ಕೈಗೊಳ್ಳುತ್ತಾರೆ,ಆದರೆ ಕೆಲವರು ಇದನ್ನು ರಾಜಕಾರಣ ಮಾಡಲು ಹೊರಟ್ಟಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.