ಮೈಸೂರು: ಕೋವಿಡ್-19ರ ಸಂದರ್ಭದಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಮೆಗಾ ಇ-ಲೋಕಅದಾಲತ್ ಹಮ್ಮಿಕೊಳ್ಳಲಾಗುತ್ತಿದ್ದು, ಸೆ. 19ರಂದು ಅನೇಕ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತಿಳಿಸಿದರು.
ಮೈಸೂರಿನ ಜಯನಗರದ ಮಳಲವಾಡಿಯಲ್ಲಿರುವ ನೂತನ ನ್ಯಾಯಾಲಯ ಕಟ್ಟಡದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ, ವರ್ಗಗಳನ್ನು ಮೀರಿ ಸರ್ವರಿಗೂ ನ್ಯಾಯ ದೊರಕಿಸುವ ಉದ್ದೇಶದಿಂದ ಇ-ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಚರ್ಚಿಸಲಾಗಿದೆ. ಅದರಲ್ಲಿ ವಿಮಾ ಕಂಪನಿಗಳ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದ್ದು, ಕಳೆದ ಹತ್ತು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಪ್ರಕರಣಗಳನ್ನು ಇ-ಲೋಕಅದಾಲತ್ ಮೂಲಕ ಇತ್ಯರ್ಥಗೊಳಿಸಲಾಗುವುದು ಎಂದರು.
ಇ-ಲೋಕಾದಾಲತ್ ಕಾರ್ಯಕ್ರಮದಿಂದ ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಮಂದಿಗೆ ಪರಿಹಾರ ಸಿಗಲಿದೆ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದವರು ಅರ್ಜಿ ಸಲ್ಲಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಟ್ಟದಲ್ಲಿ ಸ್ಪಂದಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಮಚಂದ್ರ ಡಿ. ಹುದ್ದಾರ್ ಅವರು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 1.07 ಲಕ್ಷ ಪ್ರಕರಣಗಳಿದ್ದು, ಸುಮಾರು 85 ಸಾವಿರ ಪ್ರಕರಣಗಳನ್ನು ಬಗೆಹರಿಸಬಹುದಾಗಿದೆ. ಅದರಲ್ಲಿ 6,646 ಪ್ರಕರಣಗಳನ್ನು ಶೀಘ್ರದಲ್ಲೇ ಇತ್ಯರ್ಥ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಅಪಘಾತ ವಿಮೆ, ಚಕ್‍ಬೌನ್ಸ್, ಭೂ ಸ್ವಾಧೀನ ಪ್ರಕರಣಗಳು ಸೇರಿದಂತೆ ಅನೇಕ ಪ್ರಕರಣಗಳನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಹಾಗೂ ಇತರರು ಉಪಸ್ಥಿತರಿದ್ದರು.