ಮೈಸೂರು: ಯುವಕರಿಬ್ಬರು ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಳೆ ವಾರಂಚಿ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ (24) ಮತ್ತು ರಾಜಿಕ್ ಖಾನ್ (30) ಮೃತಪಟ್ಟ ಯುವಕರು.
ಜಾನುವಾರುಗಳಿಗೆ ನೀರು ಕುಡಿಸಲು ಕೆರೆಗೆ ಹೋಗಿದ್ದ ವೇಳೆ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.
ಜಾನುವಾರುಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದ ವೇಳೆ ಆಯತಪ್ಪಿ ಬಿದ್ದವನನ್ನು ರಕ್ಷಿಸಲು ಹೋದ ಮತ್ತೊಬ್ಬ ಯುವಕ ಸೇರಿ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಹಳೆ ವಾರಂಚಿ ಗ್ರಾಮದ ಬಳಿಯ ಗುರುಪುರ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಹಗ್ಗ ಸಿಲುಕಿ ಅಬ್ದುಲ್ ನೀರಿಗೆ ಬೀಳುತ್ತಿದ್ದಂತೆ ರಾಜಿಕ್ ಖಾನ್ ಆತನನ್ನು ರಕ್ಷಿಸಲು ಹೋಗಿ ಸಾಧ್ಯವಾಗದೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಜಾನುವಾರುಗಳು ಮಾತ್ರ ಇರುವುದನ್ನು ಕಂಡ ಇತರೆ ದನಗಾಹಿಗಳು ಕೆರೆ ಬಳಿ ನೋಡಿದಾಗ ಚಪ್ಪಲಿಗಳು ಮಾತ್ರ ಇರುವುದನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೆರೆಗಿಳಿದು ಇಬ್ಬರ ಮೃತದೇಹವನ್ನು ಹೊರ ತೆಗೆಯಲಾಗಿದೆ.
ಮೃತ ರಾಜಿಕ್ ಖಾನ್ ಗೆ ಪತ್ನಿ, ಮೂರು ವರ್ಷದ ಪುತ್ರಿ ಇದ್ದಾಳೆ. ಅಬ್ದುಲ್ ಅವಿವಾಹಿತ.
ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.