ರಾಜಣ್ಣಗೆ ಡಿ.ಕೆ.ಸುರೇಶ್ ತಿರುಗೇಟು

ರಾಮನಗರ: ಉತ್ತಮ ಆಡಳಿತ ನಡೆಸಲಿ ಎಂದು ಸರ್ಕಾರ ಜವಾಬ್ದಾರಿ ಕೊಟ್ಟಿದೆ,ಯೋಗ್ಯತೆ ಇಲ್ಲವೆಂದರೆ ಅದನ್ನು ಬಿಟ್ಟು ಚುನಾವಣೆಗೆ ಹೋಗಲಿ ಎಂದು ಸಚಿವ ಕೆ.ಎನ್.ರಾಜಣ್ಣಗೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದರು.

ಲೋಕಸಭಾ ಚುನಾವಣೆ ಬಳಿಕ ಡಿಕೆಶಿ ಅಧ್ಯಕ್ಷ ಸ್ಥಾನ ಬಿಡಬೇಕೆಂದು ಹೈಕಮಾಂಡ್ ಹೇಳಿತ್ತು ಎಂಬ ಕೆ.ಎನ್.ರಾಜಣ್ಣ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಜವಾಬ್ದಾರಿ ಕೊಟ್ಟಿರುವುದು ಪಕ್ಷದ ವರಿಷ್ಠರು, ವರಿಷ್ಠರ ಮುಂದೆ ಅವರು ಎಲ್ಲವನ್ನೂ ತಿಳಿಸಿದ್ದಾರೆ. ವರಿಷ್ಠರ ಬಳಿ ನೀಡಿರುವ ಮಾಹಿತಿಯನ್ನ ಬೇರೆಯವರಿಗೆ ತಿಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯಾವುದೇ ಹುದ್ದೆಯಾಗಲೀ ನಾಯಕರಾಗಲೀ ಶಾಶ್ವತ ಅಲ್ಲ,ಏನೇನೊ ಹೇಳಿಕೆ ಕೊಡುವವರು ತಮ್ಮ ಬೆನ್ನು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಡಿಕೆಶಿ ಸಿಎಂ ಆಗಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಸು,ಅದು ಸ್ವಾಮೀಜಿಗಳ ಅಭಿಪ್ರಾಯ, ಸಿಎಂ ಸ್ಥಾನದ ಬಗ್ಗೆ ತಿರ್ಮಾನ ಮಾಡುವವರು ಪಕ್ಷದ ಹೈಕಮಾಂಡ್, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಸಿಎಂ ಸ್ಥಾನ ಖಾಲಿಯಾದ ಸಂದರ್ಭದಲ್ಲಿ ಈ ವಿಷಯ ಚರ್ಚೆಗೆ ಬರುತ್ತದೆ ಎಂದು ಹೇಳಿದರು.

ಯಾರೂ ಕೂಡ ಡಿ.ಕೆ.ಶಿವಕುಮಾರ್ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಯಾರಾದ್ರೂ ಟಾರ್ಗೆಟ್ ಮಾಡುತ್ತೇನೆ ಅಂದುಕೊಂಡರೆ ಅದು ಅವರ ಭ್ರಮೆ,

ಯಾರದೋ ಹೆಸರಿನಲ್ಲಿ ರಾಜಕೀಯಕ್ಕೆ ಬಂದವರಲ್ಲ ಡಿ.ಕೆ.ಶಿವಕುಮಾರ್ ಎಂದು ಡಿ.ಕೆ.ಸುರೇಶ್ ಹೇಳಿದರು.

ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವಿರಾ ಎಂಬ ಪ್ರಶ್ನೆಗೆ, ನನ್ನನ್ನು ಜನ ತಿರಸ್ಕರಿಸಿದ್ದಾರೆ,ನಾನು ಸಾಮಾನ್ಯ ಪ್ರಜೆಯಾಗಿ,ಕಾರ್ಯಕರ್ತನಾಗಿ ಇರುತ್ತೇನೆ, ನಾನು ಸ್ಪರ್ಧೆ ಮಾಡಲ್ಲ,ಆದರೆ ಸಮರ್ಥ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇವೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.