ಬೆಂಗಳೂರು: ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಬುಧವಾರ ಬೆಳ್ಳಂಬೆಳಿಗ್ಗೆ ಹೈಗ್ರೌಂಡ್ಸ್ ಠಾಣೆ ಬಳಿ ಇರುವ ಕೆಜಿಎಫ್ ಬಾಬು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಜಿಎಫ್ ಬಾಬು ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.
ಕಾಂಗ್ರೆಸ್ ನಾಯಕ, ಉದ್ಯಮಿಯಾಗಿರುವ ಕೆಜಿಎಫ್ ಬಾಬು ಅಲಿಯಾಸ್ ಯುಸೂಫ್ ಶರೀಫ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಕೈಗೊಳ್ಳುತ್ತಿರುವುದು ಇದು ಮೊದಲೇನಲ್ಲ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಮಾತ್ರ ಬಾಕಿ ಇದೆ. ಸಹಜವಾಗಿ ಎಲ್ಲೆಡೆ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿದ್ದು, ನಾಮಪತ್ರ ಸಲ್ಲಿಕೆಯಾಗುತ್ತಿದೆ.
ಇದರ ಜೊತೆ ಅವರ ಘೋಷಿತ ಆಸ್ತಿ ವಿವರಗಳು ಬಹಿರಂಗವಾಗುತ್ತಿದೆ. ಇದರ ನಡುವೆ ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದು ಪದೇ ಪದೇ ದಾಳಿ ನಡೆಸುತ್ತಿದ್ದಾರೆ.