ಖೈದಿಗಳಿಗೆ ಮಾದಕ ವಸ್ತು ಸರಬರಾಜು: ಜೈಲು ಸಿಬ್ಬಂದಿ ಬಂಧನ

ಬೆಂಗಳೂರು:ಬೇಲಿಯೇ ಎದ್ದು ಹೊಲ ಮೈಯ್ದಂತಾಗಿದೆ ಬೆಂಗಳೂರಿನ ಪರಪ್ಪನ ಅಹ್ರಹಾರ ಕೇಂದ್ರ ಕಾರಾಗೃಹದ ಕತೆ.

ಹೌದು ಇದು ನಿಜ. ಈ ಕಾರಾಗೃಹದ ಖೈದಿಗಳಿಗೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಮಾದಕ ವಸ್ತು ಸರಬರಾಜು ಮಾಡುತ್ತಾರೆ.

ಜೈಲಿಗೆ ಮಾದಕವಸ್ತು ಸರಬರಾಜಾಗುತ್ತಿದೆ ಎಂಬ ದೂರು ಕೇಳಿ ಬಂದಿರುವ ಬೆನ್ನಲ್ಲೇ ಒಳ ಉಡುಪಿನಲ್ಲಿ ಡ್ರಗ್ಸ್ ಇಟ್ಟುಕೊಂಡು ಸರಬರಾಜು ಮಾಡುತ್ತಿದ್ದ ಜೈಲಿನ ಪ್ರಥಮ ದರ್ಜೆ ಸಹಾಯಕನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಂಗಾಧರ್(53) ಜೈಲು ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಸಿಬ್ಬಂದಿ.

ಮಾದಕ ದ್ರವ್ಯಗಳಾದ ಎಲ್‍ಎಸ್‍ಡಿ ಮತ್ತು ಹ್ಯಾಶ್ ಆಯಿಲ್‍ನ್ನು ಆರೋಪಿ ಗಂಗಾಧರ್ ಒಳ ಉಡುಪಿನಲ್ಲಿ ಇಟ್ಟುಕೊಂಡು ಜೈಲಿನೊಳಗೆ ಸಾಗಿಸುವ ಯತ್ನ ಮಾಡುತ್ತಿದ್ದನು.

ಆತನ ವರ್ತನೆ ಕಂಡು ಅನುಮಾನ ಗೊಂಡ ಜೈಲಿನ ಅಧಿಕಾರಿಗಳು ಪರಿಶೀಲಿಸಿದಾಗ ಮಾದಕ ವಸ್ತುಗಳು ಇದ್ದುದು ಗೊತ್ತಾಗಿದೆ.

ತಕ್ಷಣ ಪರಪ್ಪನ ಅಗ್ರಹಾರ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಗಂಗಾಧರ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.