ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು 500 ವರ್ಷಗಳ ಭವ್ಯ ಇತಿಹಾಸವಿದೆ.
ಕನಕದಾಸರು ಮತ್ತು ಪುರಂಧರದಾಸರಂಥ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು ಕೀಳು ಎಂಬ ಭಾವನೆ ಮತ್ತು ಜಾತಿ-ಮತಗಳ ಸಿದ್ಧಾಂತ ಪಕ್ಕಕ್ಕೆ ಸರಿದವು.
ಕನಕ ಪುರಂದರರನ್ನು ಕನ್ನಡ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.
ದೈವಸ್ತುತಿಯೇ ಪ್ರಮುಖವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧೃವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ, ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದ್ದಾರೆ.
ಕನಕರು ಆದಿಗುರು ಶ್ರೀ ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿರುವ ಆದೈತ ತತ್ತ್ವಸಾರವನ್ನನುಸರಿಸಿ ನಾನು, ನನ್ನದೆಂಬ ಮೋಹ, ಪರಬ್ರಹ್ಮ, ಬದುಕು, ಜೀವನಸಾರವನ್ನು ಬೋಧಿಸಿ ಮನುಜಕುಲ ಒಂದೆಂಬ ತತ್ತ್ವ ಸಾರಿದವರು.
ಕನಕರು 16ನೇ ಶತಮಾನದ ಪೂರ್ವಾರ್ಧದಲ್ಲಿ ಈಗಿನ ಹಾವೇರಿ ಜಿಲ್ಲೆ, ಶಿಗ್ಗಾಂವಿ ತಾಲ್ಲೂಕಿನ ಬಾಡ ಎಂಬಲ್ಲಿ ಬೀರಪ್ಪನಾಯಕ-ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದರು.
ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತ್ಯದ ಮುಖ್ಯ ಪಟ್ಟಣದ ಹೆಸರು ಬಾಡ. ಈ ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕ (ಸೈನ್ಯ ದಳಕ್ಕೆ ಸೇನಾಪತಿ) ಬೀರಪ್ಪನಾಯಕ, ಬೀರಪ್ಪನ ಪತ್ನಿ ಬಚ್ಚಮ್ಮ, ಅನೇಕ ದಿನಗಳಿಂದ ಕುಲದೀಪಕನಾದ ಮಗ ಬೇಕೆಂದು ಬೇಡಿಕೊಂಡಿದ್ದರ ಫಲವಾಗಿ ಕನಕರು ಜನಿಸಿ, ತಿಮ್ಮಪ್ಪ ಎಂದು ನಾಮಕರಣಗೊಂಡರು. ಬಾಲಕ ತಿಮ್ಮಪ್ಪ ಬಾಲ್ಯದಲ್ಲೇ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆ ಸವಾರಿ ಕಲಿತು ಬಂಕಾಪುರ ಪ್ರಾಂತ್ಯಕ್ಕೆ ಡಣ್ಣಾಯಕನಾದ. ವಿಜಯನಗರದ ಅರಸರ ಪರವಾಗಿ ಯುದ್ದವೊಂದರಲ್ಲಿ ಪಾಲ್ಗೊಂಡಿದ್ದಾಗ, ಮಾರಣಾಂತಿಕ ಹೊಡೆತ ಅನುಭವಿಸಿ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದರು.
ತಂದೆ, ತಾಯಿ, ಬಂಧು, ಬಳಗ, ಅಪಾರ ಸೈನ್ಯ ಸಿರಿ ಸಂಪತ್ತು ಕಳೆದುಕೊಂಡು ಜರ್ಜರಿತನಾಗಿದ್ದ ಕನಕನಿಗೆ ಅಶರೀರವಾಣಿಯೊಂದು ದಾಸನಾಗು ಎಂದು ಹೇಳಿದ ಹಾಗಾಯಿತು. ಈ ಘಟನೆಯಿಂದ ಪರಿವರ್ತನೆಗೊಂಡ ಕನಕ ಸಮಸ್ತ ರಾಜ್ಯವನ್ನೆಲ್ಲಾ ಬಿಟ್ಟು ಶ್ರೀಹರಿಯನ್ನೇ ಸ್ತುತಿಸುತ್ತಾ ತಂಬೂರಿ, ತಾಳವನ್ನು ಹಿಡಿದು ಕನಕದಾಸರಾದರು.
ಕನಕದಾಸರ ಜೋಳಿಗೆಯಲಿ ಭಕ್ತಿಯ ಸಿಂಚನವಿದೆ, ಅವರ ನುಡಿಮುತ್ತುಗಳಲ್ಲಿ ಮಧುರಾಮೃತವಿದೆ, ನಮ್ಮನು ಕಾಯುವನೊಬ್ಬನಿದ್ದಾನೆ ಬೇಕು, ಬೇಡಗಳನ್ನು ಈಡೇರಿಸುವನವನೇ ಎಂದಾಗ ಮನಸ್ಸು ತುಂಬಿ ಬರುತ್ತದೆ. ಭಾರವಾದ ಹೃದಯ ಹಗುರವಾಗುತ್ತದೆ. ಜಗದ ಜಂಜಾಟದಲ್ಲಿ ಸ್ವಾರ್ಥ ಲಾಲಸೆಗಳಲ್ಲಿ ಮನವೇಕೋ ಮುದುಡಿದೆ. ಬಾಡಿದ ಹೂವಾಗಿದೆ, ಮುದುಡಿದ ಮನವ ತಣಿಸುವುದೆಂತು? ಮತ್ತೆ ಅದರಲ್ಲಿ ಚೈತನ್ಯವ ತುಂಬಿಸುವುದೆಂತು? ಸಾಂತ್ವನದ ನುಡಿ ಬಿಂದುಗಳನ್ನು ಸಿಂಪಡಿಸಿದರೆ ಸಾಲದು ಅದರೊಂದಿಗೆ ಆಧ್ಯಾತ್ಮದ ಆಪ್ತತೆಯ ಸವಿ ಬೆರೆಸಬೇಕೆಂದರು ಕನಕದಾಸರು. ತನು ನಿನ್ನದು ಜೀವನ ನಿನ್ನದು ರಂಗ ಅನುದಿನದಲಿ ಬಾಹ್ಯ ಸುಖ ದುಃಖ ನಿನ್ನದಯ್ಯ ಸರ್ವಶಕ್ತನಂತೆ ಮೆರೆಯುತ್ತಿರುವ ಮನುಷ್ಯರ ಸ್ವಾತಂತ್ರ್ಯವನ್ನು ಪ್ರಶ್ನಿಸಿದರು ದಾಸರು.
ನಾನು ಸ್ವಾತಂತ್ರ ಎನ್ನುವ ಭ್ರಾಂತಿಯನ್ನು ಕಳೆದುಕೊಂಡ ಮೇಲೆ ಅವನಿಗೆ ಸಿಗುವ ಸ್ವಾತಂತ್ರ್ಯ ಎಂಥದೆಂಬುದನ್ನೂ ವರ್ಣಿಸಿದರು. ಕಳೆದುಕೊಳ್ಳುವುದರಲ್ಲೇ ಬದುಕನ್ನು ಪಡೆದುಕೊಳ್ಳುವ ಗುಟ್ಟು ಅಡಗಿದೆ ಎಂಬುದನ್ನು ತೋರಿಸಿದವರು ಕನಕದಾಸರು.
ಕನಕದಾಸರ ಬದುಕು ನಮ್ಮೆಲ್ಲರ ಬದುಕಿಗೆ ಆದರ್ಶದ ಹೊತ್ತಿಗೆ, ಅದನ್ನು ಬಿಡಿಸಿ ಎಣಿಸಿ ಪೆÇೀಣಿಸಿದ ಪದಗಳನ್ನು ಅಥೈಸಿಕೊಂಡರಷ್ಟೇ ನಾವಾರೆಂದು ನಮಗರಿವಾಗುವುದು.
ಕನಕದಾಸರು ಯಾವುದೋ ಒಂದು ಜಾತಿ ಇಲ್ಲವೇ ಜನಾಂಗದ ಅಭಿಮಾನಕ್ಕೆ, ಆದರಕ್ಕೆ ಮಾತ್ರವೇ ಕಟ್ಟುಬೀಳಬೇಕಾದ ಕವಿಗಳ ಸಾಲಿಗೆ ಸೇರಿದವರಲ್ಲ. ಕನಕ ಕನ್ನಡ ಭಾಷಾ ಚಿಂತಕ, ಕನ್ನಡಿಗರ ಬದುಕುಗಳ ನಡುವಿನ ಬಿಕ್ಕಟ್ಟೊಳೊಳಗಿಂದ ಹುಟ್ಟಿದ, ನೊಂದ ಬದುಕುಗಳ ನಡುವಿನಿಂದ ಮೇಲೆದ್ದು ಬಂದ ಸಂತ.
ಕನಕದಾಸರು ಗಯಾ, ಮಥುರಾ, ಕಾಶಿ, ದ್ವಾರಕಾ ಮೊದಲಾಗಿ ರಾಜಸ್ಥಾನ, ತಮಿಳುನಾಡು, ಆಂಧ್ರವನ್ನು ಸುತ್ತಿ ಬಂದವರು, ಯಾವುದೇ ಮತಕ್ಕೆ ಕಟ್ಟು ಬೀಳದೆ ಸರ್ವಮತಗಳ ಒಳಿತನ್ನು ಪಡೆದು ಸ್ವಂತ ವ್ಯಕ್ತಿತ್ತ್ವವನ್ನು ಜನಹಿತಕ್ಕಾಗಿ ಬೆಳೆಸಿಕೊಂಡು ಬಾಳಿದವರು, ಉಳಿದವರೂ, ಬಾಳುವಂತೆ ಹೇಳಿದವರು. ದಬ್ಬಾಳಿಕೆಗೆ ಒಳಗಾದವರನ್ನು ಮೇಲೆತ್ತಲು ಪ್ರಯತ್ನಿಸಿದರು.
ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ, ಬಲ್ಲಿರಾ ಉಚ್ಚಕುಲ-ನೀಚಕುಲಗಳೆಂದರೆ ಸಾಮಾಜಿಕ ಸಾಮರಸ್ಯ ಮೂಡಿಸುವ ಮತ್ತು ಸಾಮರಸ್ಯಕ್ಕೆ ನೆರವಾಗಬಲ್ಲ ಕುಲಗಳೇ ಹೊರೆತು ಶ್ರೇಷ್ಠ, ಕನಿಷ್ಠ, ಅನಿಷ್ಠಗಳಲ್ಲ. ಭಾಷೆಯ ಹಿಂದಿರುವ ಭಾವವನ್ನು ತಿಳಿಯದೆ ನೀಚ ಶಬ್ದಕ್ಕೆ ಕೆಳಮಟ್ಟದೆಂದು ತಿಳಿದು ಹಾರಾಡಿದರೆ ಅದು ಹುಂಬುತನವಷ್ಟೇ. ನಮ್ಮೆಲ್ಲರ ಅಸ್ತಿತ್ವಕ್ಕೆ ಕಾರಣನಾದ ಭಗವಂತನನ್ನು ಮರೆತು ಮೇಲು-ಕೀಳೆಂಬ ತಾರತಮ್ಯವನ್ನು ಮೇಲೆಳೆದುಕೊಳ್ಳುವ ನಾವು ಕುಲದ ನೆಲೆಯನರಿಯದೆ ಕೂಗಾಡುತ್ತಿರುವೆವು, ಎಲ್ಲದಲ್ಕೂ ನೆಲೆಯೆನಿಸಿದ ಭಗವಂತನ ಪಾದ ಸೇವಿಸುವವನು ಆತನ ಕುಲಜನೆನ್ನಿಸುವನು. ಇಂತಹ ಉದಾತ್ತತೆಯನ್ನು ಕನಕದಾಸರಲ್ಲಷ್ಠ ಕಾಣಲು ಸಾಧ್ಯ. ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೇ ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣಲಿಲ್ಲವೇ ತಾವರೆ ಹೂವು ಹುಟ್ಟಿದ್ದು ಕೆಸರಲ್ಲಾದರೂ ದೇವರಿಗೆ ಮುಡಿಸುವುದಿಲ್ಲವೆ. ಹಸುವಿನ ಮಾಂಸದಿಂದಲೇ ಉತ್ಪತ್ತಿಯಾದ ಹಾಲನ್ನು ಅಮೃತಕ್ಕೆ ಸಮಾನವೆಂದು ಬಳಸುತ್ತಿಲ್ಲವೇ! ಹೀಗೆ ಹೇಳುತ್ತಾ ಹೋದರೆ ಜಾತ್ಯಾತೀತತೆಯನ್ನು ಕೆನೆಪದರದಂತೆ ಬಿಡಿಸುವ ದಾರ್ಶನಿಕತೆ ಕನಕದಾಸರದ್ದು.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ಕನ್ನಡ ಸಾಹಿತ್ಯಕ್ಕೆ ಅರ್ಪಿಸಿರುವುದಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 816 ಕೀರ್ತನೆಗಳು ಪ್ರಸಿದ್ಧವಾಗಿವೆ. ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಇನ್ನು ಹಲವಾರು ಜಗತ್ಪ್ರಸಿದ್ದವಾಗಿವೆ. ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಕನಕರು ಡಣ್ಣಾನಾಯಕರಾಗಿದ್ದಾಗ ಆಗಾಗ್ಗೆ ವಿಜಯನಗರಕ್ಕೆ ಹೋಗಬೇಕಾಗುತ್ತಿತ್ತು, ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಸಮರ ವಿಧಾನ ಮನಸೂರೆಗೊಂಡಿದ್ದವು. ಕವಿಮನಸ್ಸಿನ ಕನಕ ತಮ್ಮ ಅನುಭವವನ್ನೆಲ್ಲಾ ಬರಹರೂಪಕ್ಕೆ ತಂದರು.
ಶಂಬರಾಸುರವಧೆ, ಬಾಣಾಸುರವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯಗಳಲ್ಲಿ ಮೇಳೈಸಿವೆ. ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಪಟ್ಪದಿಯಲ್ಲಿ ರಚನೆಯಾಗಿದ್ದು 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಪ್ರೇಮಕಥೆ ನಳದಮಯಂತಿಯರದು, ಹೃದಯ ಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಆಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣಶೋಭಿಸುತ್ತಾ ಇಂದಿಗು ಜನಪ್ರಿಯವಾಗಿವೆ. ರಾಮಧಾನ್ಯ ಚರಿತೆ ಭಾಮಿನೀ ಷಟ್ಪದಿಯಲ್ಲಿ 156 ಪದ್ಯಗಳಿಂದ ರಚಿತವಾಗಿವೆ. ಈ ಕೃತಿಯಲಿ ಧನಿಕರ ಆಹಾರ ಧಾನ್ಯ ಅಕ್ಕಿ, ಕೆಳವರ್ಗದವರ ಧಾನ್ಯ ರಾಗಿ ನಡುವಿನ ಸಂಭಾಷಣೆಯ ಮೂಲಕ ರಾಗಿ ತನ್ನ ಔನ್ನತ್ಯವನ್ನು ಸಾಬೀತುಪಡಿಸುತ್ತದೆ ರಾಮಧಾನ್ಯವೆಂದು ಹೆಸರು ಪಡೆಯುತ್ತದೆ. ಈ ಕೃತಿಯ ಸೃಜನಶೀಲತೆ ಅತಿಶಯ. ನವ್ಯೋತ್ತರದ ಸೂರೆಂದರೆ ತಪ್ಪಲ್ಲ.
ಹರಿಭಕ್ತಿಸಾರ 110 ಭಕ್ತಿ ಪದ್ಯಗಳಿರುವ ಗ್ರಂಥ ಭಾಮಿನೀ ಷಟ್ಪದಿಯಲ್ಲಿ ಸರಳ ಕನ್ನಡದಲ್ಲಿ ರಚಿತವಾಗಿರುವ, ಕನ್ನಡದ ಭಗವದ್ಗೀತೆ. ಇವುಗಳಲೆಲ್ಲಾ ಕಾಣುವುದು ಜ್ಞಾನ, ಭಕ್ತಿ, ವೈರಾಗ್ಯ ಮತ್ತು ವಿನಯಶೀಲತೆ ಇವೆಲ್ಲಾ ಕನಕರ ಮುಂಡಿಗೆಗಳೆಂದು ಹೇಳುತ್ತಾರೆ.
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು, ಉಡುಪಿ ಶ್ರೀಕೃಷ್ಣನ ಅನನ್ಯ ಭಕ್ತರು, ಕಾಗಿನೆಲೆಯ ಆದಿಕೇಶವನ ಭಕ್ತರಾದ ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ.
ಕನಕರ ಸಾಹಿತ್ಯ ಅರಗಿಸಿಕೊಳ್ಳುವುದು ಕಷ್ಟವಾದರೂ ಬುದ್ಧಿಶಕ್ತಿಗೆ, ತಿಳುವಳಿಕೆಗೆ ಸವಾಲಾಗಿವೆ. ಇಂದಿನ ಜನರ ಜೀವನಶೈಲಿಗೆ ಪೂರಕವಾಗಿವೆ.
ವಿದ್ವತ್ ಸಂಪನ್ನ ಕನಕದಾಸರು, ಕುಲಾತೀತರಾಗಿ, ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವಿತೀಯ ಸ್ಥಾನಗಳಿಸಿ ಚಿರಸ್ಮರಣೀಯರಾಗಿದ್ದಾರೆ.
ಕನ್ನಡ ಸಾಹಿತ್ಯ ಸಂಸ್ಕøತಿಯಲ್ಲಿ ಚಲನಶೀಲವಾದ ನೆಲೆ ಕಂಡುಕೊಂಡ ದಾಸರ ಸಾಹಿತ್ಯ, ತತ್ತ್ವ ಸಂದೇಶಗಳು ಸಾರ್ವಕಾಲಿಕವಾಗಿವೆ. ಭಕ್ತಿ ಎಂಬುಂದು ಪಾರಾಯಣ ಮಾಡುವುದಕ್ಕಲ್ಲ. ಜ್ಞಾನೋಪಾಸನೆಗೆ ಎಂಬ ದಾರಿಯಲ್ಲಿ ತೊಡಗಿಸಿ ಕೊಂಡ ದಾಸರ ವೈಶಿಷ್ಟ್ಯ ಭಕ್ತಿಯ ಸಾಮಾಜೀಕರಣ ಅವರ ವಿಶೇಷ ಸಾಧನೆ.
ಐದು ಶತಮಾನಗಳ ಹಿಂದೆನೇ ಒಬ್ಬ ಹರಿದಾಸ, ಆಧ್ಯಾತ್ಮಿಕ ಸಂತಕವಿ ಮಾನವನ ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಿಸುತ್ತಲೇ ಜೀವನ ಮೌಲ್ಯಗಳನ್ನು ತಿಳಿ ಹೇಳಿದವರು.
ದಾಸರ ಆದರ್ಶಗುಣಗಳು ವಿಶ್ವವ್ಯಾಪಕವಾಗಲೆಂದು ಆಶಿಸುತ್ತಾ ಕನಕದಾಸರಿಗೆ ನಮ್ಮ ಪ್ರಣಾಮಗಳು.