ಕೊಪ್ಪಳ: ಕಳೆದ ಎರಡು ವಾರಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಯಲ್ಲಿ ಚಿರತೆ ಹಾವಳಿ ಹೆಚ್ಚಾದ ಕಾರಣ ಈ ಪ್ರದೇಶದಲ್ಲಿರುವ ಪ್ರವಾಸ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಆನೆಗೊಂದಿ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಅರಣ್ಯ ಇಲಾಖೆಯವರು ಬೋನ್ ಇರಿಸಿದ್ದರೂ ಚಿರತೆ ಸೆರೆ ಸಿಗದೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದೆ.
ವಾರದ ಹಿಂದೆ ತಾಲೂಕಿನ ಆನೆಗೊಂದಿಯ ದುರ್ಗಾ ಬೆಟ್ಟದಲ್ಲಿ ದುರ್ಗಾ ದೇವಸ್ಥಾನದ ಅಡುಗೆದಾರನ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆ ಮಾಸುವ ಮುನ್ನವೆ ಮತ್ತೇ ವಿರೂಪಾಪುರ ಗಡ್ಡೆ ಬಳಿ ದನಕರುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಆನೆಗೊಂದಿಯ ಬೆಟ್ಟಗುಡ್ಡಗಳು ಮತ್ತು ಭತ್ತದ ಗದ್ದೆಗಳಲ್ಲಿ ವಾಸವಾಗಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು 7 ಬೋನ್ಗಳನ್ನು ಇರಿಸಿದ್ದಾರೆ.
ಚಿರತೆ ಚಲನವಲನಗಳನ್ನು ಗುರುತಿಸಿರುವ ಅರಣ್ಯ ಇಲಾಖೆ ದುರ್ಗಾ ಬೆಟ್ಟದ ಬಳಿ 3 ಬೋನ್ಗಳು, ತಳವಾರ ಘಟ್ಟ 1, ಸುದರ್ಶನ ವರ್ಮ ಎನ್ನುವವರ ತೋಟದ ಬಳಿ 1, ಕರಿಯಮ್ಮನ ಗಡ್ಡಿ ಬಳಿ 1, ಬೆಂಚಕುಟ್ರಿ ಎನ್ನುವ ಪ್ರದೇಶಗಳಲ್ಲಿ 1 ಬೋನ್ ಇರಿಸಿದೆ ಎಂದು ಕೊಪ್ಪಳ ಡಿಸಿಎಫ್ ಹರ್ಷಭಾನು ತಿಳಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯ ಕಾಲದ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಮೇಲಿರುವ ಆಂಜನೇಯ ದೇವಾಲಯವಿದೆ. ಇದು ಆನೆಗೊಂದಿ ಬೆಟ್ಟದ ತಪ್ಪಲುಗಳಿಂದ ಸುತ್ತುವರಿದಿದ್ದು, ತುಂಗಭದ್ರಾ ನದಿ, ಪಂಪ ಸರೋವರ, ಸನಾಪುರ ಕೆರೆ, ದುರ್ಗಾದೇವಿ ದೇವಾಲಯ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿವೆ.
ಬೆಟ್ಟದ ಮೇಲಿರುವ ಆಂಜನೇಯ ದೇವಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ಲಾಕ್ ಡೌನ್ ಕಾರಣದಿಂದ ಬಂದ್ ಆಗಿತ್ತು, ಆದರೆ ಲಾಕ್ ಡೌನ್ ತೆರವಿನ ನಂತರ ಭಕ್ತರು ಅಪಾರ ಪ್ರಮಾಣದಲ್ಲಿ ಆಗಮಿಸಲು ಆರಂಭಿಸಿದ್ದಾರೆ.