ಮೈಸೂರು, ಸೆ. 27- ನಗರದ ಕೆ. ಆರ್. ಠಾಣೆ ಪೊಲೀಸರು ಕುಖ್ಯಾತ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರಿನ 2ನೇ ಈದ್ಗಾ ಮಂಡಿ ಮೊಹಲ್ಲಾದ ವಾಸಿ ಮಹಮ್ಮದ್ ಫರಾಜ್ (28), ಬೆಂಗಳೂರಿನ ವೆಂಕಟೇಶ್ವರಂ ಭಾರತ್ ಮಾತಾ ಲೇಔಟ್ ಟ್ಯಾನಿ ರೋಡ್ ಕೆ.ಜಿ ಹಳ್ಳಿ 4ನೇ ಕ್ರಾಸ್‍ನ ಅರ್ಬಾಜ್ ಖಾನ್ (24), ಬೆಂಗಳೂರಿನ ಸದ್ದಾಂ ನಗರ ಅಂಬೇಡ್ಕರ್ ಮುಖ್ಯ ರಸ್ತೆ ಕಾವಲ್ ಬೈಸಂದ್ರ ಸೈಯದ್ ಮಸೀದಿ ಹತ್ತಿರದ 3ನೇ ಕ್ರಾಸ್ ನಿವಾಸಿ ಜಿಬ್ರಾನ್ ಖಾನ್ (19) ಹಾಗೂ ಹುಣಸೂರಿನ ಶಬೀರ್‍ನಗರ ಶಾಹಿ ಮಜೀದ್ ಮೇನ್ ರೋಡ್ ರಜಾಕ್ ಮೊಹಲ್ಲದ ವಾಸಿ ಇಮ್ರಾನ್ ಖಾನ್ (21) ಬಂಧಿತ ಆರೋಪಿಗಳು.
ಈ ನಾಲ್ವರ ಬಂಧನದಿಂದ ಒಟ್ಟು 6 ಸರಗಳ್ಳತನ ಹಾಗೂ 7 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ.
ಕೃಷ್ಣರಾಜ ಪೊಲೀಸರು ಸೆ. 21ರಂದು ಗಸ್ತಿನಲ್ಲಿದ್ದಾಗ ಚಾಮುಂಡಿಬೆಟ್ಟದ ಮುಖ್ಯರಸ್ತೆಯಲ್ಲಿರುವ ಉತ್ತನಹಳ್ಳಿ ಕಡೆಗೆ ಹೋಗುವ ಜಂಕ್ಷನ್ ಬಳಿ 4 ಮಂದಿ ಯುವಕರು ಒಂದು ಸ್ಪ್ಲೆಂಡರ್ ಬೈಕ್ ಮತ್ತು ಡಿಯೋ ಸ್ಕೂಟರ್‍ನ್ನು ನಿಲ್ಲಿಸಿಕೊಂಡು ನಿಂತಿದ್ದು, ಪೊಲೀಸ್ ಜೀಪನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಆಗ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿಗಳು ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4, ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ 1, ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ 1 ಸರಗಳ್ಳತನ ಹಾಗೂ ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4, ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಪೊಲೀಸರು ರೂ. 14.10 ಲಕ್ಷ ಮೌಲ್ಯದ 214 ಗ್ರಾಂ ತೂಕದ 6 ಚಿನ್ನದ ಸರಗಳು, 7 ವಿವಿಧ ಮಾದರಿಯ ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಮಹಮ್ಮದ್ ಫರಾಜ್ ವಿರುದ್ದ ಮೈಸೂರು ಮತ್ತು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ದರೋಡೆ ಮತ್ತು ಸುಲಿಗೆ ಪ್ರಕರಣಗಳು ದಾಖಲಾಗಿದೆ.
ಮೈಸೂರು ನಗರದ ಡಿ.ಸಿ.ಪಿ.ಗಳಾದ ಡಾ: ಎ.ಎನ್. ಪ್ರಕಾಶ್‍ಗೌಡ, ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಎ.ಸಿ.ಪಿ. ಪೂರ್ಣಚಂದ್ರ ತೇಜಸ್ವಿರವರ ನೇತೃತ್ವದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಲ್. ಶ್ರೀನಿವಾಸ್, ಪಿ.ಎಸ್.ಐ. ಸಿ.ಎನ್. ಸುನೀಲ್, ಎ.ಎಸ್.ಐ. ಡಿ.ಬಿ. ಸುರೇಶ್, ಮೊಖದ್ದರ್ ಷರೀಪ್, ಪಿ.ಗಂಗಾಧರ್. ಎಂ. ಶ್ರೀನಿವಾಸ್ ಪ್ರಸಾದ್, ಎಸ್. ಸತೀಶ್ ಕುಮಾರ್, ಅಭಿಷೇಕ್ ಬೆಂಜಮಿನ್, ಎಂ. ಮಧು, ಶರತ್ ಕುಮಾರ್, ಎನ್. ರಾಗಿಣಿ ಮತ್ತು ತಾಂತ್ರಿಕ ಘಟಕದ ಪೊಲೀಸ್ ನಿರೀಕ್ಷಕರಾದ ಲೋಲಾಕ್ಷಿ, ಸಿಬ್ಬಂದಿಗಳಾದ ಮಂಜುನಾಥ್, ಗುರುದೇವ ಆರಾಧ್ಯ, ಕುಮಾರ್, ಮತ್ತು ಶ್ಯಾಮ್ ಅವರುಗಳು ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.