ಕುಮಾರಸ್ವಾಮಿ ಹೆದರುವುದು ದೇವರಿಗೆ, ಜನರಿಗೆ ಮಾತ್ರ: ಸಿದ್ದುಗೆ ಹೆಚ್ ಡಿ ಕೆ ಟಾಂಗ್

ಬೆಂಗಳೂರು: ಈ‌ ಕುಮಾರಸ್ವಾಮಿ ಹೆದರುವುದು ದೇವರಿಗೆ ಮತ್ತು ನಾಡಿನ ಜನರಿಗೆ ಮಾತ್ರ,ಸಿದ್ದರಾಮಯ್ಯ ನವರಿಗಲ್ಲ ತಿಳಿದುಕೊಳ್ಳಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ ಡಿಕೆ,ಯಾರನ್ನು ಕಂಡರೆ ಯಾರಿಗೆ ಭಯ, ನಾನು ಭಯ ಪಡೋಕೆ ಸಿಎಂ ಏನಾದರೂ ದೆವ್ವವೇ ಅವರೇನು ದೆವ್ವ ಅಲ್ಲವಲ್ಲಾ, ಅವರಂದ್ರೆ ನಾನು ಯಾಕೆ ಭಯಪಡಲಿ.ಅಷ್ಟಕ್ಕೂ ನಾನು ದೆವ್ವಕ್ಕೂ ಹೆದರಲ್ಲ, ಇದು ಸಿದ್ದರಾಮಯ್ಯಗೆ ಗೊತ್ತಿರಲಿ ಎಂದು ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ‌ಹೆದರಿಸೋಕೆ ಯಾರಿಂದಲೂ ಆಗಲ್ಲ, ಸಿದ್ದರಾಮಯ್ಯನಂಥವರು ಲಕ್ಷ ಜನ ಬರಲಿ, ನಾನು ಹೆದರಲ್ಲ. ಹೆದರೋದು ನನ್ನ‌ ಬೆಳೆಸಿರುವ ನಾಡಿನ‌ ಜನಕ್ಕೆ ಎಂದು ಹೇಳಿದರು.

ನಾನೇನು ರಾಜಕೀಯದಲ್ಲಿ ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೀನಾ, ಸ್ವತಃ ದುಡಿಮೆ ಮೇಲೆ‌, ಕಾರ್ಯಕರ್ತರು, ಜನರ ಆಶೀರ್ವಾದದಿಂದ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ನಾನು ರಾಜಕೀಯ ಮಾಡಿಲ್ಲ, ಹಾಗೆ ನೋಡಿದರೆ ಸಿಎಂ ಸಿದ್ದರಾಮಯ್ಯನವರು ನನ್ನ ಪಕ್ಷದ ಕಾರ್ಯಕರ್ತರು ಮತ್ತು ದೇವೇಗೌಡರ ನೆರಳಿನಲ್ಲಿ ಬಂದವರು‌ ಅದನ್ನು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು

ಅದು ಯಾವುದೋ ಕೇಸ್ ಹಾಕಿಕೊಂಡು ನನ್ನ ಹೆದರಿಸೋಕೆ ಆಗುತ್ತಾ, ಕುಮಾರಸ್ವಾಮಿಗೆ ಬಂಧನದ ಭೀತಿ ಅಂತ ಹೇಳುತ್ತಿದ್ದಾರೆ ನನಗೆ ಯಾವುದೇ ಭೀತಿಯೋ ಇಲ್ಲ ಎಂದು ಹೇಳಿದರು.

ಮುಡಾ‌ ವಿಚಾರ ಡೈವರ್ಟ್ ಮಾಡಲು ಎಫ್ಐಆರ್ ಹಾಕಲಾಗಿದೀಯಾ ಎಂಬ ಪ್ರಶ್ನೆಗೆ ಪ್ರತಿಯೊಂದು ಕೂಡಾ ಡೈವರ್ಟ್ ಮಾಡೋದಕ್ಕೇನೆ ನಡೆಯು ತ್ತಿರೋದು. ಈ ಸರ್ಕಾರ ಎಲ್ಲವನ್ನೂ ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಭಂಡ ಸರ್ಕಾರ ಇದು ಎಂದು ಕಮಾರಸ್ವಾಮಿ ಕುಟುಕಿದರು.