ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು, ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಘಟನೆಯ ಹೊಣೆ ಹೊತ್ತುಕೊಂಡಿದೆ. ಜತೆಗೆ ಎಡಿಜಿಪಿ ಅಲೋಕ್ಕುಮಾರ್ ಅವರಿಗೂ ಬೆದರಿಕೆ ಹಾಕಲಾಗಿದೆ.
ಅನಾಮದೇಯ ಮೂಲಗಳಿಂದ ಬಂದಿರುವ ಪತ್ರಿಕಾ ಹೇಳಿಕೆಯ ತಲೆಬರಹ ಅರೆಬಿಕ್ ಭಾಷೆಯಲ್ಲಿದೆ.
ಮಜಿಲ್ ಅಲ್ ಮುಕ್ವಾವಹಮ್ಮದ್ ಅಲ್-ಇಸ್ಲಾಮಿಯಾ ಎಂದು ಬರೆಯಲಾಗಿದ್ದು, ಕೆಳಗೆ ಶಂಕಿತ ಉಗ್ರ ಶಾರಿಕ್ನ ಎರಡು ಫೋಟೋಗಳನ್ನು ಪ್ರಕಟಿಸಲಾಗಿದೆ.
ಒಂದು ಫೋಟೋ ಆತ ಸೋಟಕ್ಕೂ ಮುನ್ನ ವಿಶೇಷವಾಗಿ ಫೋಸ್ಕೊಟ್ಟಿರುವುದು, ಮತ್ತೊಂದು ಸ್ಪೋಟದ ಬಳಿಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
ಪತ್ರದಲ್ಲಿ ಸ್ಪೋಟಕ್ಕೆ ತಾವೇ ಹೊಣೆ ಎಂದು ಹೇಳಿಕೊಂಡಿದ್ದು, ಹಿಂದುಗಳ ಧಾರ್ಮಿಕ ಶ್ರದ್ಧಾಕೇಂದ್ರ ಕದ್ರಿಯನ್ನು ಸ್ಪೋಟಿಸುವ ಗುರಿ ಹೊಂದಿದ್ದಾಗಿ ತಿಳಿಸಲಾಗಿದೆ.
ಅನಾಮದೇಯ ಪತ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾದ ಅಲೋಕ್ ಕುಮಾರ್ಗೆ ಬೆದರಿಕೆ ಹಾಕಲಾಗಿದೆ.
ನಿಮ್ಮ ಸಂತೋಷ ಹೆಚ್ಚು ದಿನ ಇರುವುದಿಲ್ಲ, ನಿಮ್ಮ ದಬ್ಬಾಳಿಕೆಗೆ ಶೀಘ್ರವೇ ನೀವು ಪ್ರತಿಫಲವನ್ನು ಪಡೆಯುತ್ತೀರಿ ಎಂದು ಎಚ್ಚರಿಸಲಾಗಿದೆ.
ಕರ್ನಾಟಕದಲ್ಲಿ ಗುಂಪು ದಾಳಿ, ಧರ್ಮದ ಮೇಲೆ ಶಾಸನ ಮತ್ತು ಕಾನೂನಿನ ದಬ್ಬಾಳಿಕೆಗೆ ಪ್ರತಿಕಾರವಾಗಿ ಮಂಗಳೂರು ಕದ್ರಿ ದೇವಸ್ಥಾನ ಸ್ಪೋಟಕ್ಕೆ ಸ್ಕೆಚ್ ಹಾಕಿದ್ದಾಗಿ ತಿಳಿಸಲಾಗಿದೆ.
ಪತ್ರದ ಕೊನೆಯಲ್ಲಿ ನಮ್ಮ ಕಾರ್ಯಾಚರಣೆಯ ಅನುಪಾಲನಾ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸುವುದಾಗಿಯೂ ಸ್ಪಷ್ಟಪಡಿಸಲಾಗಿದೆ.
ಹಮ್ಮಾಜ್ ಇರಾಕ್, ಇರಾನ್, ಸಿರಿಯಾ, ಆಫ್ಘಾನಿಸ್ತಾನ ಸೇರಿದಂತೆ ಹಲವು ಕಡೆ ಪ್ರಬಲ ಕಾರ್ಯಚರಣೆ ನಡೆಸುವ ಉಗ್ರ ಸಂಘಟನೆಯಾಗಿದೆ.
ಎಡಿಜಿಪಿ ಅಲೋಕ್ಕುಮಾರ್ ಅವರು ಈ ಕುರಿತು ಮಾತನಾಡಿ ಮಾಹಿತಿ ತಮ್ಮ ಗಮನಕ್ಕೂ ಬಂದಿದೆ ಅದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಈವರೆಗಿನ ಮಾಹಿತಿಯ ಪ್ರಕಾರ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಎಂಬ ಸಂಘಟನೆ ಅಸ್ಥಿತ್ವದಲ್ಲಿಲ್ಲ. ದುರುದ್ದೇಶ ಪೂರ್ವಕವಾಗಿ ಕಿತಾಪತಿ ಮಾಡಲು ಈ ರೀತಿಯ ಸಂದೇಶ ಹರಿಯಬಿಟ್ಟಿರುವ ಅನುಮಾನಗಳಿವೆ ಎಂದಿದ್ದಾರೆ.
ಎಲ್ಲಿಂದ ಬಂದಿವೆ, ಯಾರು ಕಳುಹಿಸಿದ್ದಾರೆ ಎಂಬುದರ ಸತ್ಯಾಸತ್ಯತೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.