ಕುರಿ ಮೇಕೆ ಸಾಕುವ ಶ್ರೇಷ್ಟ ವೃತ್ತಿ ದೇಶಕ್ಕೆ ಅಭಿಮಾನದ ಸಂಕೇತ: ಬಂಡಾರು ದತ್ತಾತ್ರೇಯ

ಬೆಳಗಾವಿ: ಕುರುಬನ ಆರ್ಥಿಕ, ಸಾಮಾಜಿಕ ಸ್ಥಿತಿ ಸರಿ ಇರುವುದಿಲ್ಲ, ಆದರೆ ಆತನ ಕುರಿ ಮೇಕೆ ಸಾಕುವ ಶ್ರೇಷ್ಟ ವೃತ್ತಿ ದೇಶಕ್ಕೆ ಅಭಿಮಾನದ ಸಂಕೇತ ಎಂದು ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ತಿಳಿಸಿದರು.

ಬೆಳಗಾವಿಯಲ್ಲಿ ಆಯೋಜಿಸಿರುವ ಬೃಹತ್ ಕುರುಬ ಸಮಾವೇಶ ಹಾಗೂ ಶೇಫರ್ಡ್ಸ್ ಇಂಡಿಯಾ 9ನೇ ಪ್ರತಿನಿಧಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು‌ ಅವರು ಮಾತನಾಡಿದರು.

ಹೊಲಗದ್ದೆ,ಅಡವಿ, ಜಂಗಲಗಳಲ್ಲಿ ಮಳೆ, ಚಳಿ ಬಿಸಿಲು ಲೆಕ್ಕಿಸದೇ ಕುರಿ ಮೇಕೆ ಮೇಯಿಸುವ ಕುರುಬ ದೇಶದ ಸ್ವಾಭಿಮಾನದ ಸಂಕೇತ. ಆತನಲ್ಲಿ ಮುಗ್ದತೆ ಮತ್ತು ಪ್ರಕೃತಿಯೊಂದಿಗೆ ಮಿಳಿತ ಸೆಳೆತ ಅಡಗಿದೆ.

ಕುರುಬ ಸಮಾಜ ಇಂದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಳವಣಿಗೆಯ ಹಾದಿಯಲ್ಲಿದೆ. ಸರಕಾರ ಮತ್ತು‌ ಇತರ ಸಮಾಜಗಳು ಕುರುಬರಿಗೆ ಸಹಾಯ ಸಹಕಾರ ಪ್ರೀತಿ ವಿಶ್ವಾಸ ತೋರಿಸಿದರೆ ಸಮಾಜದಲ್ಲಿ ಮುಖ್ಯ ವಾಹಿನಿಗೆ ಕುರುಬರು ಸಹ ಬರಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಕುರುಬ ಸಮಾಜದಲ್ಲಿ ತಳಹದಿ ಜೀವನ ಮಾಡುತ್ತಿರುವವರ ಸ್ಥಿತಿಗತಿಗಳ ಸುಧಾರಣೆಗೆ ಸರಕಾರದ ಸಹಾಯ, ಉದಾರಿತನ ಸಾಕಷ್ಟು ಬೇಕಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿ ಆಗಿ ಎರಡನೇ ಭಾರಿ ಅಧಿಕಾರ ಹಿಡಿದಿರುವುದು ಸಮಾಜದಲ್ಲಿ ಕುರುಬರನ್ನು ಗುರುತಿಸುವಂತೆ ಮಾಡಿದೆ. ಉತ್ತಮ ಆಡಳಿತ, ದಾಖಲೆ ಬಜೆಟ್ ಮಂಡನೆ ಕುರುಬ ಸಮಾಜಕ್ಕೆ ಹೆಮ್ಮೆಯ ಸಂಕೇತ ಎಂದು ಬಂಡಾರು ದತ್ತಾತ್ರೇಯ ಬಣ್ಣಿಸಿದರು.