ಕುಶಾಲನಗರ ಸೈನಿಕ ಶಾಲೆ ಅಭಿವೃದ್ಧಿಗೆ 5 ಕೋಟಿಗೆ ಮನವಿ: ಸಚಿವ ಎಸ್.ಟಿ.ಎಸ್

ಕುಶಾಲನಗರ: ಕುಶಾಲನಗರದ ಸೈನಿಕ ಶಾಲೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಹಾಗೂ ಶಾಸಕ ಅಪ್ಪಚ್ಚು ರಂಜನ್ ಅವರು ಮಂಗಳವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲರಾದ ಜಿ. ಕಣ್ಣನ್ ಅವರ ಜೊತೆ ಕೆಲ ಕಾಲ ಚರ್ಚೆ ನಡೆಸಿದರು.
2018ರಲ್ಲಿ ಹಾರಂಗಿ ಜಲಾಶಯದಿಂದ ನೀರು ಬಿಟ್ಟ ಸಂದರ್ಭದಲ್ಲಿ ಶಾಲಾ ಆವರಣಕ್ಕೆ ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಈ ಸಂಬಂಧ ಸರ್ಕಾರದ ಮಟ್ಟದಿಂದ ಯಾವುದಾದರೂ ಸಹಾಯವಾಗಬಹುದೇ ಎಂದು ಪ್ರಾಂಶುಪಾಲರಾದ ಕಣ್ಣನ್ ಅವರು ಸಹಕಾರ ಸಚಿವ ಸೋಮಶೇಖರ್ ಅವರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಎಸ್.ಟಿ. ಎಸ್, ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ, ಪರಿಸ್ಥಿತಿಯನ್ನು ವಿವರಿಸಿದರು.
ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಬಳಿ ಸೈನಿಕ ಶಾಲೆಗೆ ಆದ ತೊಂದರೆ ಬಗ್ಗೆ ಸಚಿವರಾದ ಸೋಮಶೇಖರ್ ಅವರು ವಿವರಣೆ ನೀಡುವ ಸಂದರ್ಭದಲ್ಲಿ, ಶಾಲೆಯ ಅಭಿವೃದ್ಧಿಗೆ 5 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಮಂಜೂರಾತಿ ಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ರಾಕೇಶ್ ಸಿಂಗ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರಾದ ಅಪ್ಪಚ್ಚು ರಂಜನ್ ಅವರು ಇದ್ದರು.