ಲಡಾಖ್ ಗಡಿಯಲ್ಲಿ ಶೋಲ್ಡರ್ ಫೈಯರ್ಡ್ ಕ್ಷಿಪಣಿ ಸಜ್ಜಿತ ಪಡೆಗಳ ನಿಯೋಜನೆ

ನವದೆಹಲಿ: ಪೂರ್ವ ಲಡಾಖ್‍ನ ನೈಜ ನಿಯಂತ್ರಣ ರೇಖೆಯ (ಎಲ್‍ಎಸಿ) ಸಮೀಪದಲ್ಲಿ ಚೀನಾದ ಹೆಲಿಕಾಪ್ಟರ್‍ಗಳು ಚಟುವಟಿಕೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಪಡೆಗಳು ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತಿವೆ.
ಶೋಲ್ಡರ್ ಫೈಯರ್ಡ್ (ಭುಜದಲ್ಲಿ ಹಿಡಿದು ಹಾರಿಸಬಲ್ಲ) ವಾಯು ರಕ್ಷಣಾ ಕ್ಷಿಪಣಿಗಳಿಂದ ಸಜ್ಜಿತರಾದ ಸೈನಿಕರನ್ನು ಅಲ್ಲಿ ಭಾರತೀಯ ಸೇನೆ ನಿಯೋಜಿಸಿದೆ.
ರಷ್ಯಾದ ಮೂಲದ ಇಗ್ಲಾ ವಾಯು ರಕ್ಷಣಾ ವ್ಯವಸ್ಥೆಯಿಂದ ಶಸ್ತ್ರಸಜ್ಜಿತವಾದ ಭಾರತೀಯ ಪಡೆಗಳನ್ನು ಗಡಿಯುದ್ದಕ್ಕೂ ನಿರ್ಣಾಯಕ ಎತ್ತರದಲ್ಲಿ ನಿಯೋಜಿಸಲಾಗಿದೆ.
ಅಲ್ಲಿನ ಭಾರತೀಯ ವಾಯು ಜಾಗವನ್ನು ಉಲ್ಲಂಘಿಸಲು ಪ್ರಯತ್ನಿಸುವ ಯಾವುದೇ ಶತ್ರು ವಿಮಾನಗಳನ್ನು ಹೊಡೆದುರುಳಿಸಬಹುದು ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಮೂಲದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಭೂ ಸೇನೆ ಮತ್ತು ವಾಯುಪಡೆ ಎರಡೂ ಬಳಸುತ್ತವೆ ಮತ್ತು ಶತ್ರು ಫೈಟರ್ ಜೆಟ್‍ಗಳು ಅಥವಾ ಚಾಪರ್‍ಗಳು ಸಮೀಪಕ್ಕೆ ಬಂದಾಗ ಅಥವಾ ಯುದ್ಧದ ಸಮಯದಲ್ಲಿ ಇವುಗಳನ್ನು ನಿಯೋಜಿಸಿ ಬಳಸಲಾಗುತ್ತದೆ.
ಭಾರತವು ಗಡಿಯುದ್ದಕ್ಕೂ ರಾಡಾರ್ ಮತ್ತು ಸರ್ಫೇಸ್ ಏರ್ ಮಿಸೈಲ್ ಸಿಸ್ಟಮ್ ಅನ್ನು ನಿಯೋಜಿಸುವ ಮೂಲಕ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಿದೆ ಮತ್ತು ಶತ್ರುವಿನ ಚಲನವಲನಗಳ ಮೇಲೆ ಸೂಕ್ಷ್ಮ ನಿಗಾ ಇಟ್ಟಿದೆ.
ಪೂರ್ವ ಲಡಾಖ್ ವಲಯದಲ್ಲಿ ಚೀನಾ ಹೆಲಿಕಾಪ್ಟರ್ ಗಳ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಭಾರತವು ವಾಯು ರಕ್ಷಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ.