ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ವಾರಾಂತ್ಯದ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ವಿಧಿಸುವ ಅಗತ್ಯ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರಬಹುದು. ಆದರೆ ಅದರ ಪರಿಣಾಮ ಕಡಿಮೆಯಿದೆ. ಹೀಗಾಗಿ ಲಾಕ್ಡೌನ್ ಇಲ್ಲವೇ ನೈಟ್ ಕರ್ಫ್ಯೂ ವಿಧಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾನು ಕರ್ನಾಟಕ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಲಾಕ್ಡೌನ್ ಮತ್ತು ನೈಟ್ ಕರ್ಫ್ಯೂ ವಿಧಿಸಿದರೆ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಸರ್ಕಾರ ಇದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.
ಪರಿಸ್ಥಿತಿಯನ್ನು ಪರಾಮರ್ಶಿಸಿ ತಜ್ಞರ ಸಲಹೆ ಪಡೆದು ಸರ್ಕಾರ ಕ್ರಮ ತೆಗೆದುಕೊಳ್ಳಲು ನನ್ನ ಅಭ್ಯಂತರವಿಲ್ಲ. ವೈದ್ಯರ ಅಭಿಪ್ರಾಯ ಒಂದು ರೀತಿ ಇದ್ದರೆ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಅಭಿಪ್ರಾಯ ಇನ್ನೊಂದು ರೀತಿಯಿದೆ. ಇದು ಸಹಜವಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ ಎಂದವರು ದೂರಿದರು.
ಲಾಕ್ಡೌನ್ ಹೇರಬಾರದು. ವೈದ್ಯರ ಅಭಿಪ್ರಾಯವೂ ಇದೇ ಆಗಿದೆ. ಕೊರೊನಾ ಸೋಂಕು ವೇಗವಾಗಿ ಹರಡಿದರೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.