ಮಡಿವಾಳರಿಗೆ ದೋಭಿಘಾಟ್ ಗೆ 2 ಎಕರೆ ಜಮೀನು -ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ದೋಭಿಘಾಟ್ ನಿರ್ಮಿಸಲು 2 ಎಕರೆ ಜಮೀನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಡಿವಾಳ ಮಾಚಿದೇವ ಸಂಘದಿಂದ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ನಿಲಯದ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ದೋಭಿ ಘಾಟ್ ನಿರ್ಮಾಣಕ್ಕೆ 2 ಎಕರೆ ಜಮೀನು ಮಂಜೂರು ಮಾಡಲಾಗುವುದು. ವಿದ್ಯಾರ್ಥಿ ನಿಲಯಕ್ಕೆ ಬೇಕಾಗುವ ಹೆಚ್ಚುವರಿ ಹಣವನ್ನೂ ನೀಡಲಾಗುವುದು. ಜಿಲ್ಲೆಯಲ್ಲಿ ಮಡಿವಾಳರಿಗೆ 500 ಇಸ್ತ್ರಿ ಪೆಟ್ಟಿಗೆ ನೀಡುವ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದರು.
ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಮಾನ ಅವಕಾಶ ನೀಡಿದಾಗ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಮಡಿವಾಳ ಸಮಾಜ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಅನೇಕ ಶತಮಾನಗಳಿಂದ ಉಡುಪು ಶುಚಿ ಮಾಡುವ ಕಾಯಕದಲ್ಲಿರುವ ಮಡಿವಾಳ ಸಮಾಜದ ಸಾಮಾಜಿಕ ಕಳಕಳಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
2ಎ ನಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವ ಬೇಡಿಕೆಯನ್ನು ಮಡಿವಾಳ ಸಮಾಜ ಮುಂದಿಟ್ಟಿದೆ. ಪ್ರತಿ ಸಮುದಾಯ ಕೂಡ ಮೀಸಲು ಬೇಕು ಎಂದು ಬೇಡಿಕೆ ಇಡುತ್ತಿದೆ. ಅನೇಕ ಸಮುದಾಯಗಳ ಗುರುಗಳು ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಸರ್ಕಾರಕ್ಕೆ ಇದು ಸವಾಲಿನ ಪ್ರಶ್ನೆಯಾಗಿದ್ದು, ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳಲು ಸಾಧವಿಲ್ಲ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ವಿಶೇಷ ಅವಕಾಶ ನಿರ್ಮಿಸಬೇಕು. ಮೀಸಲಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದರು.
ಕೆಲ ರಾಜ್ಯಗಳಲ್ಲಿ ರಾಜಕೀಯ ಕಾರಣಕ್ಕಾಗಿ ಮೀಸಲು ಪ್ರಮಾಣ ಹೆಚ್ಚಿಸಲಾಗಿದೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಆ ವರದಿ ಆಧರಿಸಿಯೇ ಮೀಸಲು ನೀಡಬೇಕಾಗುತ್ತದೆ ಎಂದರು.