ಮಾಡಾಳ್  ಪುತ್ರ ಲಂಚ ಸ್ವೀಕಾರ: ಬಿಜೆಪಿ ಭ್ರಷ್ಟಾಚಾರಕ್ಕೆ ಸಾಕ್ಷಿ -ಸಿದ್ಧರಾಮಯ್ಯ

ಬೆಳಗಾವಿ: ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಿಎಂ ದಾಖಲೆ ಕೇಳಿದ್ದಾರೆ. ಅವರ ಪಕ್ಷದ ಶಾಸಕನ ಪುತ್ರ ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ  ಸಿಕ್ಕಿಬಿದ್ದಿದ್ದಾನೆ,ಇವರ ಭ್ರಷ್ಟಾಚಾರಕ್ಕೆ

ಇನ್ನೇನು ಸಾಕ್ಷಿ ಬೇಕು ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಟಾಂಗ್​ ನೀಡಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಒಳ್ಳೆಯ ಆಡಳಿತ ಕೊಡಲಿಲ್ಲ. ಜನರ ಪರವಾಗಿ ಕೆಲಸ ಮಾಡಲಿಲ್ಲ, ಬರೀ ಭ್ರಷ್ಟಾಚಾರ, ಲೂಟಿ ಹೊಡೆಯುದರಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕದ ಇತಿಹಾಸದಲ್ಲಿ 40% ಕಮಿಷನ್ ವಿಚಾರವಾಗಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದರೂ, ಪ್ರಧಾನಿ ಎನೂ ಕ್ರಮ ಕೈಗೊಳ್ಳಲಿಲ್ಲ.ಅವರೂ ಕೂಡಾ ರಾಜ್ಯ ಸರ್ಕಾರದ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಅನ್ನೋ ಸಂದೇಶ ಜನರಿಗೆ ರವಾನೆಯಾಗಿದೆ ಎಂದು ಹೇಳಿದರು.

ಬಿಜೆಪಿಯವರು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದಲ್ಲ. ಆಪರೇಷನ್ ಕಮಲ ಮೂಲಕ ಅನೈತಿಕವಾಗಿ ಸರ್ಕಾರ ರಚನೆ ಮಾಡಿದ್ದರು.

ಸಮ್ಮಿಶ್ರ ಸರ್ಕಾರ ಮಾಡಿ ಹೆಚ್.ಡಿ ಕುಮಾರಸ್ವಾಮಿಯನ್ನ ಸಿಎಂ ಮಾಡಿದೆವು. ಆದರೆ ಅವರ ಕಾರ್ಯವೈಖರಿಯಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು.

ಅದಕ್ಕೆ ಕಾಯುತ್ತಿದ್ದ ಬಿಜೆಪಿ ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಕೆಳಗಿಳಿಸಿ ಸರ್ಕಾರ‌ ರಚಿಸಿದರು ಎಂದು ಸಿದ್ದು ದೂರಿದರು.