ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾಗೆ ಸಚಿವ ವಿ.ಸೋಮಣ್ಣರಿಂದ ಚಾಲನೆ

ಮಡಿಕೇರಿ: ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭವಾಗುವುದರೊಂದಿಗೆ ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾಗೆ ಶನಿವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಗರದ ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ಈ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಪಂಪಿನಕೆರೆಯಲ್ಲಿ ಸಾಂಪ್ರದಾಯಿಕವಾಗಿ ಮತ್ತು ಸರಳವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 9 ದಿನಗಳ ನವರಾತ್ರಿ ದಸರಾ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮೊದಲನೇ ಬಾರಿಗೆ ಕರಗ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಂತಸ ತಂದಿದೆ. 150 ವರ್ಷಕ್ಕೂ ಮೇಲ್ಪಟ್ಟ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಡಿಕೇರಿ ದಸರಾ ಆಚರಣೆಯನ್ನು ಮುಂದುವರಿಸಿಕೊಂಡು ಬರಲಾಗಿದೆ ಎಂದರು.
ಕೋವಿಡ್ ಹಿನ್ನೆಲೆ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸಲಾಗುತ್ತಿದೆ ಎಂದು ಹೇಳಿದ ಸಚಿವರು ನಗರದ ನಾಲ್ಕು ಶಕ್ತಿದೇವತೆಗಳು ಕೋವಿಡ್ ಸೋಂಕು ಹೋಗಲಾಡಿಸಿ, ದೇಶ ಮತ್ತು ರಾಜ್ಯದಲ್ಲಿ ಸುಭೀಕ್ಷೆ ತರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ಅವರು ಹೇಳಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಡಿಕೇರಿ ದಸರಾಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸಲಾಗುತ್ತಿದೆ ಎಂದರು.
ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ದೇವಾಲಯದ ಕರಗನ್ನು ಉಮೇಶ್ ಸುಬ್ರಮಣಿ ಹಾಗೂ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಕರಗವನ್ನು ನವೀನ್ ಪೂಜಾರಿ ಅವರು ಹೊತ್ತುಕೊಂಡು ಸಾಗಿದರು.
ಜಿ.ಪಂ.ಸಿ.ಇ.ಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಡಿಸಿಎಫ್ ಪ್ರಭಾಕರನ್, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡೂ, ಡಿವೈಎಸ್ಪಿ ದಿನೇಶ್ ಕುಮಾರ್, ದಸರಾ ಸಮಿತಿ ಕಾರ್ಯಧ್ಯಕ್ಷರಾದ ರಾಬಿನ್ ದೇವಯ್ಯ, ಪೌರಾಯುಕ್ತರಾದ ರಾಮ್‍ದಾಸ್, ನಾನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಇತರರು ಇದ್ದರು.