ಮಡಿಕೇರಿ: ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಂದ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ನೂತನ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದಸರಾ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಎಲ್ಲ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಬೇಕು. ಪ್ರವಾಸಿ ತಾಣಗಳಲ್ಲಿ ಪೆÇಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಿ ಆರೋಗ್ಯ ತಪಾಸಣೆ ಸಹಿತ ಇತರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಆರೋಗ್ಯ ಸೇವೆಯಲ್ಲಿ ಕೆಲ ನ್ಯೂನತೆಗಳಿವೆ. ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ವೈದ್ಯರ ಕೊರತೆ ನೀಗಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೊದಲು ಕೊಡಗು ಜಿಲ್ಲೆ ಹಸಿರು ವಲಯದಲ್ಲಿತ್ತು. ಅನ್ ಲಾಕ್ ಬಳಿಕ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕೆಲ ಕಟ್ಟುನಿಟ್ಟಾಗಿ ಮಾರ್ಗಸೂಚಿ ಜಾರಿಗೊಳಿಸಲು ಸ್ಥಳಿಯ ಶಾಸಕರು ಸಲಹೆ ನೀಡಿದ್ದಾರೆ ಇದು ಸ್ವಾಗತಾರ್ಹ ಎಂದರು.
ಶಾಲೆ ಪುನರಾರಂಭ ಇಲ್ಲ: ಅ. 15ರಿಂದ ಶಾಲೆಗಳ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಸೋಂಕು ಏರುಗತಿಯ ಮಧ್ಯದಲ್ಲಿದೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಸಮಂಜಸವಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ದಸರಾ ಮನರಂಜನಾ ಕಾರ್ಯಕ್ರಮ ಇಲ್ಲ: ಕೇರಳದಲ್ಲಿ ಓಣಂ ಸಂದರ್ಭದಲ್ಲಿ ಆದ ಲೋಪ ದಸರಾ ಸಂದರ್ಭದಲ್ಲಿ ಮರುಕಳಿಸಬಾರದು. ಉತ್ಸವ ಸಂದರ್ಭದಲ್ಲಿ 50 ಜನರಿಗಿಂತ ಹೆಚ್ಚು ಮಂದಿ ಸೇರಬಾರದು, ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಸ್ನಾನ ಮಾಡುವುದು ಮತ್ತು ದಸರಾ ಮನರಂಜನಾ ಕಾರ್ಯಕ್ರಮಗಳನ್ನು ಈ ವರ್ಷ ನಿರ್ಬಂಧಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.