ಮಡಿಕೇರಿ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

ಮಡಿಕೇರಿ: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮಂಗಳವಾರ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೂಡಿಗೆಯಲ್ಲಿನ ಸೈನಿಕ ಶಾಲೆಗೆ ಹೆಲಿಕಾಪ್ಟರ್ ಮುಖೇನ ಆಗಮಿಸಿದ ತಂಡ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿದರು.
ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ ಅಧ್ಯಯನ ನಡೆಯಲಿದೆ.
ಕೂಡಿಗೆಯ ಸೈನಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಯಲ್ಲಿ ಉಂಟಾದ ಹಾನಿಯ ಬಗ್ಗೆ ಪಿಪಿಟಿ ಮುಖಾಂತರವಾಗಿ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೀಡಾದ ರಸ್ತೆ, ಸೇತುವೆ, ಅಂಗನವಾಡಿ ಕೇಂದ್ರಗಳು, ಶಾಲೆ ಮತ್ತು ಮನೆ ಹಾನಿಯ ಸಂಬಂಧ ಜಿಲ್ಲಾಧಿಕಾರಿಯವರು ಅಂಕಿ ಅಂಶ ಸಹಿತ ವರದಿ ನೀಡಿದರು.
ಮಡಿಕೇರಿ ತಾಲೂಕಿನ ಕಡಗದಾಳುವಿನ ಬೊಟ್ಲಪ್ಪ ಪೈಸಾರಿಗೆ ಭೇಟಿ ನೀಡಿದ ಕೇಂದ್ರ ತಂಡ ಅಲ್ಲಿನ ಭೂಕುಸಿತ ಪ್ರದೇಶ ಮತ್ತು ಬೆಳೆಹಾನಿ ಸ್ಥಳಗಳನ್ನು ಪರಿಶೀಲಿಸಿದರು.
ಈ ಸಂದರ್ಭ ತೋಟದ ಮಾಲೀಕರಿಂದಲೇ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು.
ಬಳಿಕ ಭಾಗಮಂಡಲಕ್ಕೆ ತೆರಳಿದ ಕೇಂದ್ರ ತಂಡವು ಅಲ್ಲಿನ ಕಾಫಿ ಮತ್ತು ಕಾಳುಮೆಣಸು ಹಾನಿಯಾದ ಸ್ಥಳವನ್ನು ವೀಕ್ಷಿಸಿದರು.
ನಂತರ ಗಜಗಿರಿ ಬೆಟ್ಟದಲ್ಲಿ ಭೂಕುಸಿತ ಉಂಟಾದ ಸ್ಥಳಕ್ಕೆ ತಂಡ ಭೇಟಿ ನೀಡಿತು. ಈ ಸಂದರ್ಭ ಜಿಲ್ಲಾಧಿಕಾರಿ ಅವರು ಆಗಸ್ಟ್ ಮೊದಲ ವಾರದಲ್ಲಿ ಇದ್ದ ಪರಿಸ್ಥಿತಿಯನ್ನು ಛಾಯಾಚಿತ್ರದ ಮೂಲಕ ಕೇಂದ್ರ ತಂಡಕ್ಕೆ ವಿವರಿಸಿದರು. ಬಳಿಕ ನಾರಾಯಣಾಚಾರ್ ಅವರ ಮನೆ ಇದ್ದ ಸ್ಥಳಕ್ಕೆ ತೆರಳಿ ಪರಿವೀಕ್ಷಣೆ ನಡೆಸಿದರು.
ಕೋರಂಗಾಲದ ರಸ್ತೆ ಹಾನಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜೊತೆಗೆ ಬಲ್ಲಮಾವಟಿ ಗ್ರಾ.ಪಂ.ವ್ಯಾಪ್ತಿಯ ದೊಡ್ಡ ಪುಲಿಕೋಟುವಿನ ಹಾನಿಯಾದ ಅಂಗನವಾಡಿ ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಣೆ ಮಾಡಿದರು.
ಜಿ.ಪಂ ಸಿ.ಇ.ಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ. ಇಒ ಇತರರು ಇದ್ದರು.