ಮಹಿಳೆಯರ ಬೆತ್ತಲೆ ಮೆರವಣಿಗೆ : ಸುಪ್ರೀಂಕೋರ್ಟ್ ಅಸಮಾಧಾನ

ನವದೆಹಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ವಿಚಾರ ಸಂಬಂಧ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ವೋಚ್ಛ ನ್ಯಾಯಾಲಯವು ಸ್ವಯಂ ದೂರು ದಾಖಲಿಸಿಕೊಂಡಿದೆ. ಅಲ್ಲದೆ  ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಮತ್ತು ಮಣಿಪುರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸ್ವಯಂ ದೂರು ದಾಖಲಿಸಿದ ನಂತರ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆ ವೇಳೆ ಉಪಸ್ಥಿತರಿರುವಂತೆ ಮುಖ್ಯ ನ್ಯಾಯಾಧೀಶ ಡಿ.ವೈ ಚಂದ್ರಚೂಡ್  ಸೂಚನೆ ನೀಡಿದ್ದರು.

ಬಳಿಕ ವಿಚಾರಣೆ ಆರಂಭಿಸಿದ ಸಿಜೆಐ ನಾವು ವಿಡಿಯೋ ನೋಡಿ ವಿಚಲಿತರಾಗಿದ್ದೇವೆ, ಹಿಂಸಾಚಾರ ಪ್ರದೇಶದಲ್ಲಿ ಮಹಿಳೆಯನ್ನು ಸಾಧನವಾಗಿ ಬಳಸಿಕೊಂಡಿರುವುದು ತೀವ್ರ ಕಳವಳಕಾರಿ ಸಂಗತಿ ಎಂದು ಹೇಳಿದರು.

ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಪ್ರಜಾಪುಭುತ್ವ ವ್ಯವಸ್ಥೆಯಲ್ಲಿ ಇದು ಸ್ವೀಕಾರವಲ್ಲ. ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳಲು ಸ್ವಲ್ಪ ಸಮಯ ನೀಡುತ್ತೇವೆ.

ಅಪರಾಧಿಗಳನ್ನು ಬಂಧಿಸಲು ಅಧಿಕಾರಿಗಳು ಮೇ ತಿಂಗಳಿನಿಂದ ಕೈಗೊಂಡ ಕ್ರಮಗಳು ಏನು, ಘಟನೆಗಳು ಮರುಕಳಿಸದಿರಲು  ತೆಗೆದುಕೊಂಡ ನಿರ್ಧಾರಗಳೇನು ಎಂಬ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಮುಂದಿನ ಶುಕ್ರವಾರ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯವನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಳ್ಳುತ್ತಿದೆ.

ಅಂದು ನ್ಯಾಯಾಲಯಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಮುಖ್ಯ ನ್ಯಾಧೀಶರು ನಿರ್ದೇಶಿಸಿದರು.