ಮಹಾನ್ ಸೇನಾನಿಯನ್ನು ಕಳೆದು ಕೊಂಡ ಭಾರತ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಸಾವನ್ನು ಜಯಿಸಿ ಬರಲು ಭಾರತೀಯರು ಮಾಡಿದ ಪ್ರಾರ್ಥನೆಗಳು ಈಡೇರಲಿಲ್ಲ. ದೇಶದ ಪಾಲಿಗೆ ಡಿಸೆಂಬರ್ 8ನೇ ತಾರೀಕು ಕರಾಳ ದಿನವಾಗಿ ಪರಿಣಮಿಸಿತು.

ಇಡೀ ಭಾರತೀಯರು ವೀರ ಪುತ್ರ ನನ್ನು ಕಳೆದು ಕೊಂಡು ಶೋಕಸಾಗರದಲ್ಲಿ ಮುಳುಗಿತು. ದೇಶದ ಮೊದಲ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಸೇನಾ ಪ್ರಧಾನ ದಂಡ ನಾಯಕ ಜನರಲ್ ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಪತನಗೊಂಡಿದೆ.

ಈ ಸೇನಾ ಹೆಲಿಕಾಪ್ಟರ್ ನಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದರು.

ಈ ದುರ್ಘಟನೆಯಲ್ಲಿ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ 13 ಮಂದಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಜನರಲ್ ಬಿಪಿನ್ ರಾವತ್ ಕೂಡ ಕೊನೆಯುಸಿರೆಳೆದಿದ್ದಾರೆ.

ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ 63 ವರ್ಷದ ಬಿಪಿನ್ ರಾವತ್ ಸರ್ಜಿಕಲ್ ಸ್ಟ್ರೈಕ್, ಬಾಲ್ ಕೋಟ ದಾಳಿ, ಮನ್ಮರ್ ಸೇನಾ ಪಡೆಗಳ ದಾಳಿಯಂತಹ ಹಲವು ಸೇನಾ ಕಾರ್ಯಾಚರಣೆ ನೇತೃತ್ವ ವಹಿಸಿಕೊಂಡಿದ್ದರು.

ಬಿಪಿನ್ ರಾವತ್ ಅವರು ಉತ್ತರಾಖಂಡದ ಪೌರಿ ಪ್ರದೇಶದಲ್ಲಿ 1958 ಮಾರ್ಚ್ 16ರಂದು ಹಿಂದೂ ಘರ್ ವಾಲಿ ಕುಟುಂಬದಲ್ಲಿ ಜನಿಸಿದರು.

ಕುಟುಂಬವು ಅನೇಕ ತಲೆಮಾರುಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಪೌರಿ ಗರ್ವಾಲ್ ಜಿಲ್ಲೆಯ ಸೈನ್ಜ್ ಗ್ರಾಮದವರು ಮತ್ತು ಲೆಫ್ಟಿನೆಂಟ್ ಜನರಲ್ ಆಗಿದ್ದರು. ಇವರ ತಾಯಿ ಉತ್ತರಕಾಶಿ ಜಿಲ್ಲೆಯವರು ಮತ್ತು ಉತ್ತರಕಾಶಿಯ ಮಾಜಿ ಶಾಸಕ ಕಿಶನ್ ಸಿಂಗ್ ಪರ್ಮಾರ್ ಅವರ ಮಗಳಾಗಿದ್ದಾರೆ. ರಾವತ್ ಅವರು ಮಾತ್ರವಲ್ಲದೆ ಅವರ ಇಡೀ ಕುಟುಂಬವೇ ಭಾರತೀಯ ಸೈನ್ಯಕ್ಕೆ ಸೇವೆಸಲ್ಲಿಸಿತ್ತು.

ಬಿಪಿನ್ ರಾವತ್ ತಂದೆಯ ಲಕ್ಷ್ಮಣ ಸಿಂಗ್ ರಾವತ್ ಸಹ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಣೆ ಮಾಡಿದರು. ಇಷ್ಟೇ ಅಲ್ಲದೆ ಬಿಪಿನ್ ರಾವತ್ ಅವರ ಚಿಕ್ಕಪ್ಪ ಹರಿನಂದನ್, ಭರತ್ ಸಿಂಗ್ ರಾವತ್ ಅವರು ಭಾರತೀಯ ಸೈನ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡಿ ನಿವೃತ್ತಿ ಗೊಂಡಿದ್ದರು. ಅಲ್ಲದೇ ಇವರ ಮಕ್ಕಳು ಸಹ ಭಾರತೀಯ ಸೈನ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ .

ಬಿಪಿನ್ ರಾವತ್ ಶೈಕ್ಷಣಿಕ ಹಿನ್ನೆಲೆ
ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ವೆಲ್ಲಿಂಗ್ಟನ್) ಮತ್ತು ಕಮಾಂಡ್ ಮತ್ತು ಜನರಲ್ ಸ್ಟಾಫ್ ಕೋರ್ಸ್, ಫೆÇೀರ್ಟ್ ಲೀವೆನ್ವರ್ತ್ (ಯುಎಸ್‍ಎ)ನಲ್ಲಿ ಬಿಪಿನ್ ರಾವತ್ ಪದವೀಧರರಾಗಿದ್ದರು. ಅವರು ಮೊವ್ನಲ್ಲಿ ಹೈಯರ್ ಕಮಾಂಡ್ ಕೋರ್ಸ್ಗೆ ಹಾಜರಾಗಿದ್ದು, ನವದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅವರು ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಸ್ಟಡೀಸ್ನಲ್ಲಿ ಎರಡು ಡಿಪೆÇ್ಲಮಾಗಳನ್ನು ಸಹ ಹೊಂದಿದ್ದಾರೆ. ಮೀರತ್ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ‘ಮಿಲಿಟರಿ ಮೀಡಿಯಾ ಸ್ಟ್ರಾಟೆಜಿಕ್ ಸ್ಟಡೀಸ್’ ಕುರಿತು ಅವರ ಸಂಶೋಧನೆಗಾಗಿ ಜನರಲ್ಗೆ ‘ಡಾಕ್ಟರೇಟ್ ಆಫ್ ಫಿಲಾಸಫಿ’ (ಪಿಎಚ್ಡಿ) ನೀಡಲಾಯಿತು.

ಶೈಕ್ಷಣಿಕ ವಲಯದಲ್ಲಿ ಹೆಚ್ಚು ಒಲವು ಹೊಂದಿರುವ ಬಿಪಿನ್ ರಾವತ್, ರಾಷ್ಟ್ರೀಯ ಭದ್ರತೆ ಮತ್ತು ಮಿಲಿಟರಿ ನಾಯಕತ್ವದ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವುಗಳು ವಿವಿಧ ಜರ್ನಲ್ಗಳಲ್ಲಿ ಪ್ರಕಟವಾಗಿವೆ.
ಬಿಪಿನ್ ರಾವತ್ ವೈಯಕ್ತಿಕ ಜೀವನ

ಮಧುಲಿಕಾ ರಾವತ್ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾದ ಬಿಪಿನ್ ರಾವತ್ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ. ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್, ಭಾರತೀಯ ಸೈನ್ಯದಲ್ಲಿ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.

ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ದ ಅಧ್ಯಕ್ಷರಾಗಿದ್ದಾರೆ.

ಅವರು ಸೈನಿಕರ ಪತ್ನಿ, ಮಕ್ಕಳ ಕಲ್ಯಾಣಕ್ಕಾಗಿ ತಮ್ಮನ್ನು ಮೀಸಲಿಟ್ಟಿದ್ದಾರೆ. ಈ ಸಂಘ ಭಾರತದಲ್ಲಿರುವ ಅತಿದೊಡ್ಡ ಎನ್ಜಿಒಗಳಲ್ಲಿ ಒಂದಾಗಿದೆ. ಮಧುಲಿಕಾ ದೇಶಕ್ಕಾಗಿ ಪ್ರಾಣತೊರೆದವರ ಪತ್ನಿಯರು ಹಾಗೂ ಮಕ್ಕಳಿಗೆ ಸಹಾಯ ಮಾಡಲು ಎನ್ಜಿಒ ಆರಂಭಿಸಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ದಿವ್ಯಾಂಗ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ಸೇನೆಯಿಂದ ನಿವೃತ್ತಿ ಹೊಂದಿದವರು ಹಾಗೂ ಸೇನೆಯಲ್ಲಿದ್ದಾಗ ಕೆಲವು ಘಟನೆಗಳಲ್ಲಿ ತಮ್ಮ ಅಂಗಾಂಗವನ್ನೇ ಕಳೆದುಕೊಂಡಿರುವವರಿಗೂ ಸಹಾಯ ಮಾಡುವ ಎನ್ಜಿಒ ಇದಾಗಿದೆ. ಸೇನಾ ಕಾಲೇಜು, ಶಾಲೆಗಳಿಗೆ ಎನ್ಜಿಒ ಮೂಲಕ ಸಹಾಯ ಮಾಡುತ್ತಿದ್ದಾರೆ.

ಮಧುಲಿಕಾ ಅವರು ಸೈನಿಕರ ಪತ್ನಿಯರನ್ನು ಸಬಲೀಕರಣಗೊಳಿಸುವ ಪ್ರಯತ್ನದಲ್ಲಿದ್ದಾರೆ. ಬ್ಯೂಟಿಷಿಯನ್ ಕೋರ್ಸ್ ಜತೆಗೆ, ಟೈಲರಿಂಗ್, ಬ್ಯಾಗ್ ಮೇಕಿಂಗ್ ಕೋರ್ಸ್ಗಳನ್ನು ತೆಗೆದುಕೊಳ್ಳಲು ಪೆÇ್ರೀತ್ಸಾಹಿಸುತ್ತಿದ್ದಾರೆ.

ಕೇಕ್, ಚಾಕೊಲೇಟ್ ತಯಾರಿಕೆ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಿರುತ್ತಾರೆ. ಮಧುಲಿಕಾ ರಾವತ್ ಅವರು ದೆಹಲಿಯಲ್ಲಿ ಅಧ್ಯಯನ ಮಾಡಿದ್ದಾರೆ, ದೆಹಲಿ ವಿಶ್ವ ವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಈ ಸಂಘಟನೆಯ ಹೊರತಾಗಿಯೂ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಕ್ಯಾನ್ಸರ್ ಪೀಡಿತರ ಜತೆ ಬೆನ್ನೆಲುಬಾಗಿ ನಿಂತು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಮಧುಲಿಕಾ ರಾವತ್ ಅವರು ಪತಿ ಬಿಪಿನ್ ರಾವತ್ ಅವರೊಂದಿಗೆ ಊಟಿಯಲ್ಲಿರುವ ಡಿಫೆನ್ಸ್ ಸರ್ವೀಸ್ ಕಾಲೇಜಿಗೆ ತೆರಳುತ್ತಿರುವಾಗ ಹೆಲಿಕಾಪ್ಟರ್ ಪತನ ಸಂಭವಿಸಿದೆ. ಮಧುಲಿಕಾ ಅವರು ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.

ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ಸೇವೆ
ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್, ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಆಗಿದ್ದಾರೆ. ಅವರು 16 ಡಿಸೆಂಬರ್ 1978ರಂದು ಪದಾತಿದಳದ ಹನ್ನೊಂದನೇ ಗೂರ್ಖಾ ರೈಫಲ್ಸ್ನ ಐದನೇ ಬೆಟಾಲಿಯನ್ಗೆ ನಿಯೋಜಿಸಲ್ಪಟ್ಟರು, ಈ ಬೆಟಾಲಿಯನ್ ಅನ್ನು ಅವರ ತಂದೆ ನೇತೃತ್ವ ವಹಿಸಿಕೊಂಡಿದ್ದರು. ಡೆಹ್ರಾಡೂನ್ನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದ ನಂತರ ಅವರು ಅಸ್ಕರ್ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿ ಪಡೆದರು.

ಜನರಲ್ ಬಿಪಿನ್ ರಾವತ್ ವ್ಯಾಪಕ ಕಾರ್ಯಾಚರಣೆಗಳ ಮೂಲಕ ಹೆಚ್ಚಿನ ಅನುಭವವನ್ನು ಪಡೆದುಕೊಂಡಿದ್ದು, ವ್ಯಾಪಕ ಶ್ರೇಣಿಯ ಯುದ್ಧ ಮತ್ತು ಸಂಘರ್ಷದ ಸಂದರ್ಭಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪೂರ್ವ ವಲಯದಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪದಾತಿದಳದ ಬೆಟಾಲಿಯನ್ ಮತ್ತು ಕಾಶ್ಮೀರ ಕಣಿವೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಸೆಕ್ಟರ್ಗೆ ಕಮಾಂಡರ್ ಆಗಿದ್ದರು.

ಬಿಪಿನ್ ರಾವತ್ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪದಾತಿ ದಳದ ವಿಭಾಗ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಲಾಯಿತು. ಈಶಾನ್ಯದಲ್ಲಿ ಕಾರ್ಪ್ಸ್ ಕಮಾಂಡರ್ ಆಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಆರ್ಮಿ ಕಮಾಂಡರ್ ಆಗಿ, ಅವರು ಪಾಶ್ಚಿಮಾತ್ಯ ಮುಂಭಾಗದಲ್ಲಿ ಮರುಭೂಮಿ ವಲಯದಲ್ಲಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ ದಿನಗಳ ನಂತರ, ಫೆಬ್ರವರಿ 2019ರಲ್ಲಿ ಪಾಕಿಸ್ತಾನದ ಬಾಲಾಕೋಟ್‍ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಭಾರತವು ವೈಮಾನಿಕ ದಾಳಿ ನಡೆಸಿದಾಗ ಸೇನಾ ಮುಖ್ಯಸ್ಥರಾಗಿದ್ದು ಇದೇ ಬಿಪಿನ್ ರಾವತ್.

2015ರಲ್ಲಿ ನೆರೆಯ ಮ್ಯಾನ್ಮಾರ್‍ನಲ್ಲಿ ಗಡಿಯಾಚೆಗಿನ ಪ್ರತಿ-ಬಂಡಾಯ ಕಾರ್ಯಾಚರಣೆಯನ್ನು ಮೇಲ್ವಿಚಾರಣೆಯನ್ನು ಬಿಪಿನ್ ರಾವತ್ ಮಾಡಿದ್ದರು. ಅದೇ ರೀತಿ ಹಲವು ಸೇನಾ ಕಾರ್ಯಾಚರಣೆ ಮತ್ತು ಕಾರ್ಯತಂತ್ರಗಳ ಹಿಂದಿದ್ದ ಒಂದೇ ಒಂದು ಹೆಸರು ಎಂದರೆ ಅದು ಬಿಪಿನ್ ರಾವತ್. ಅಂಥ ಸೇನಾ ಮುಖ್ಯಸ್ಥರನ್ನು ಇಂದು ಹೆಲಿಕಾಪ್ಟರ್ ದುರಂತದಲ್ಲಿ ಕಳೆದುಕೊಳ್ಳಲಾಗಿದೆ.

2016ರಲ್ಲಿ ಸರ್ಜಿಕಲ್ ಸ್ಟ್ರೈಕ್
ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಈ ವೇಳೆ 19 ಯೋಧರು ಹುತಾತ್ಮರಾಗಿದ್ದರು. ಉಗ್ರರ ದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್‍ನಲ್ಲಿ ಭಾರತವು ನಿಯಂತ್ರಣ ರೇಖೆ ಬಳಿಯುದ್ಧಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಅಂದು ಬಿಪಿನ್ ರಾವತ್ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದರು. ಸರ್ಜಿಕಲ್ ಸ್ಟ್ರೈಕ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದ್ದು, ದೆಹಲಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಕುರಿತು ಮೇಲ್ವಿಚಾರಣೆ ನಡೆಸಿದ್ದರು. ಇದಾಗಿ ಮೂರು ತಿಂಗಳ ನಂತರ, ಅವರು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.

ಪಾಕಿಸ್ತಾನಕ್ಕೆ ಕಠಿಣ ಸಂದೇಶ
ಕಳೆದ ವರ್ಷ ದಾಳಿಗಳ ಕುರಿತು ಬಿಪಿನ್ ರಾವತ್ ಹೀಗೆ ಹೇಳಿದ್ದರು: “ಉರಿ ಭಯೋತ್ಪಾದನಾ ದಾಳಿಯ ನಂತರದ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ವೈಮಾನಿಕ ದಾಳಿಗಳು ಪಾಕಿಸ್ತಾನಕ್ಕೆ ಬಲವಾದ ಎಚ್ಚರಿಕೆಯನ್ನು ನೀಡಿವೆ. ಅದು ಇನ್ನು ಮುಂದೆ ಭಯೋತ್ಪಾದಕರನ್ನು ನಿಯಂತ್ರಣ ರೇಖೆಯ ಮೂಲಕ ಕಳುಹಿಸುವ ಆಟಗಳು ದೀರ್ಘಾವಧಿವರೆಗೂ ನಡೆಯುವುದಿಲ್ಲ ಎಂದು ಎಚ್ಚರಿಸಿದ್ದರು.

ಜನರಲ್ ಬಿಪಿನ್ ರಾವತ್ ಅವರನ್ನು 31 ಡಿಸೆಂಬರ್ 2019 ರಂದು ಭಾರತದ ಮೊದಲ ರಕ್ಷಣಾ ಸಿಬ್ಬಂದಿಯಾಗಿ ನೇಮಿಸಲಾಯಿತು. ಜನರಲ್ ಬಿಪಿನ್ ರಾವತ್ ಹಲವು ಪ್ರಮುಖ ಸೂಚನಾ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ನಡೆಸಿದ್ದಾರೆ. ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ಡೆಹ್ರಾಡೂನ್) ಮತ್ತು ಜೂನಿಯರ್ ಕಮಾಂಡ್ ವಿಂಗ್ನಲ್ಲಿ ಹಿರಿಯ ಬೋಧಕರಾಗಿದ್ದರು. ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ ಆಗಿದ್ದರು, ಕರ್ನಲ್ ಮತ್ತು ನಂತರ ಮಿಲಿಟರಿ ಕಾರ್ಯದರ್ಶಿಯ ಶಾಖೆಯಲ್ಲಿ ಉಪ ಮಿಲಿಟರಿ ಕಾರ್ಯದರ್ಶಿ, ಪೂರ್ವ ರಂಗಮಂದಿರದ ಮೇಜರ್ ಜನರಲ್ ಜನರಲ್ ಸ್ಟಾಫ್ ಮತ್ತು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರೂ ಆಗಿ ಸೇವೆ ಸಲ್ಲಿಸಿದ್ದರು. ಜನರಲ್ ಅವರು 31 ಡಿಸೆಂಬರ್ 2016 ರಿಂದ 31 ಡಿಸೆಂಬರ್ 2019 ರವರೆಗೆ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದರು.

ಈ ಹುದ್ದೆ ಸೃಷ್ಟಿಯಾಗಿದ್ದೇ ರಾವತ್ ಅವರಿಂದ. ಭೂ ಸೇನೆ, ನೌಕಾ ಪಡೆ ಹಾಗೂ ವಾಯುಪಡೆ ಈ ಮೂರು ವಿಭಾಗಗಳಿಗೆ ಇದಕ್ಕೂ ಮುನ್ನ ಮುಖ್ಯಸ್ಥರು ಎಂಬ ಹುದ್ದೆಯೇ ಇರಲಿಲ್ಲ. ಇದು ಸಂಪೂರ್ಣವಾಗಿ ರಾಷ್ಟ್ರಪತಿಗಳ ಅಂಕಿತದಲ್ಲಿತ್ತು.

ಆದರೆ ರಾಷ್ಟ್ರಪತಿಯವರಿಗೆ ಇಂಥದ್ದೊಂದು ಹುದ್ದೆಯನ್ನೂ ನಿರ್ವಹಿಸುವುದು ಕಷ್ಟ ಎಂಬ ಕಾರಣಕ್ಕೆ ಪರಮೋಚ್ಚ ಮಿಲಿಟರಿ ಅಧಿಕಾರಿಯ ನೇಮಕ ಆಗಬೇಕೆಂದು ಬಹಳ ವರ್ಷಗಳಿಂದಲೂ ಹೋರಾಟ ನಡೆದಿತ್ತು. ಈ ಹೋರಾಟದ ಕಿಚ್ಚು ಹೆಚ್ಚಾಗಿದ್ದು, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ. ಈ ಸಮಯದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಯೋಧರು ಸಫಲರಾಗಿದ್ದರೂ ಕೂಡ ಯುದ್ಧದಲ್ಲಿ ಸೇನೆಯ ಹಲವು ಲೋಪದೋಷಗಳು ಎಲ್ಲರನ್ನೂ ಬಹಳ ಚಿಂತೆಗೆ ಈಡುಮಾಡಿತ್ತು. ಆ ಸಮಯದಲ್ಲಿ ರಚನೆಯಾದ ಸಮಿತಿ ಕೂಡ ಈ ಮೂರೂ ಸೇನೆಗೂ ಒಬ್ಬ ದಂಡಾಧಿಕಾರಿ ಇರಬೇಕು ಎಂದು ಹೇಳುತ್ತಲೇ ಬಂದಿತ್ತು.

ಆದರೆ ಹಿಂದಿನ ಸರ್ಕಾರಗಳು ಅದನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ನಂತರ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಜಾರಿಗೆ ತಂದು ಜನರಲ್ ಬಿಪಿನ್ ರಾವತ್ ಅವರನ್ನು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡಿದರು.

ಅದೇ ಸಮಯದಲ್ಲಿ ರಾವತ್ ಅವರು ನಿವೃತ್ತರಾಗುವುದರಲ್ಲಿದ್ದರು. ಆದರೆ ಮಾರನೆಯ ದಿನ ನಿವೃತ್ತಿ ಎಂದರೆ ಹಿಂದಿನ ದಿನವೇ 62 ವರ್ಷದ ಬಿಪಿನ್ ರಾವತ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿತ್ತು. ಅವರಿಗಿಂತಲೂ ಈ ಹುದ್ದೆ ಏರಲು ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರಿತಿತ್ತು. ಇದೇ ಕಾರಣಕ್ಕೆ ಅವರನ್ನು ನೇಮಕ ಮಾಡಿದ್ದರೂ ಅಲ್ಲದೇ ಕಾನೂನು ಕೂಡ ಬದಲಾಯಿತು. ಸೇನಾ ಮುಖ್ಯಸ್ಥರ ವಯೋಮಿತಿಯನ್ನು 62ರಿಂದ 65 ವರ್ಷಕ್ಕೆ ಏರಿಸಲಾಯಿತು. ಈ ಮೂಲಕ ರಾವತ್ ಅವರಿಗೆ ಮೂರು ವರ್ಷಗಳ ಅಧಿಕಾರಾವಧಿ ಸಿಕ್ಕಿತು.

ಈ ಮೂರೂ ಸೇನೆಗಳಲ್ಲಿ ಸಹಕಾರ, ಸಮನ್ವಯತೆ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ಈ ಹುದ್ದೆಗೆ ಇರುತ್ತದೆ. ತುರ್ತು ಪರಿಸ್ಥಿತಿ ಎದುರಾದಾಗ, ದೇಶದ ಭದ್ರತೆಯ ಸಂದರ್ಭದಲ್ಲಿ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಇವರ ಮೇಲಿರುತ್ತದೆ. ಈ ಸಂದರ್ಭಗಳಲ್ಲಿ ಸರ್ಕಾರವು ಮೂರು ಸೇನಾಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಪ್ರಮೇಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ಇವರೇ ಸರ್ಕಾರದ ಪಾಲಿಗೆ ಏಕಗವಾಕ್ಷಿಯಾಗಿದ್ದರು.

2015ರ ಅಪಘಾತದಲ್ಲಿ ಬದುಕುಳಿದಿದ್ದ ರಾವತ್
ನಾಲ್ಕು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ಜನರಲ್ ರಾವತ್ ಯುದ್ಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಮಾಜಿ ಮುಖ್ಯಸ್ಥರ ಪ್ರಕಾರ ಸೇನೆಯಲ್ಲಿ ವಿವಿಧ ಕಾರ್ಯಕಾರಿ ಹಂತಗಳಲ್ಲಿ ಸೇವೆ ಸಲ್ಲಿಸಿದರು. ಅವರು ಆರು ವರ್ಷಗಳ ಹಿಂದೆ 2015 ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದಾಗ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದಿದ್ದರು. ಫೆಬ್ರವರಿ 3, 2015ರಂದು, ಅವರು ಪ್ರಯಾಣಿಸುತ್ತಿದ್ದ ಚೀತಾ ಹೆಲಿಕಾಪ್ಟರ್ ನಾಗಾಲ್ಯಾಂಡ್‍ನಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ಈ ವೇಳೆ ವಿಮಾನದಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು.

ಬಿಪಿನ್ ರಾವತ್ ಅವರಿಗೆ ದೊರೆತ ಪ್ರಶಸ್ತಿಗಳು
ಅವರ 40 ವರ್ಷಗಳ ವೃತ್ತಿಜೀವನದ ಅವಧಿಯಲ್ಲಿ, ಅವರು ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಸೇನಾ ಪದಕಗಳೊಂದಿಗೆ ಶೌರ್ಯ ಮತ್ತು ವಿಶಿಷ್ಟ ಸೇವೆಗಾಗಿ ಪ್ರಶಸ್ತಿಗಳನ್ನು ಪಡೆದಿದ್ದರು.

ಜನರಲ್ ಬಿಪಿನ್ ರಾವತ್ ಅವರಿಗೆ PVSM, UYSM, AVSM, YSM, SM ಮತ್ತು VSM ಸೇರಿದಂತೆ ಹಲವಾರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ. ಇವುಗಳ ಜೊತೆಗೆ, ಅವರು ಎರಡು ಸಂದರ್ಭಗಳಲ್ಲಿ ಸೇನಾ ಮುಖ್ಯಸ್ಥರ ಶ್ಲಾಘನೆ ಮತ್ತು ಸೇನಾ ಕಮಾಂಡರ್ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾಂಗೋದಲ್ಲಿ ಯುಎನ್ನೊಂದಿಗೆ ಸೇವೆ ಸಲ್ಲಿಸುತ್ತಿರುವಾಗ, ಅವರಿಗೆ ಎರಡು ಬಾರಿ ಫೆÇೀರ್ಸ್ ಕಮಾಂಡರ್ ಪ್ರಶಂಸೆ ನೀಡಲಾಗಿದೆ.

2018ರಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಛತ್ತಿಸ್ಗಢಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಯ್ಪುರದ ದೆಲ್ಲಿ ಪಬ್ಲಿಕ್ ಶಾಲೆಯ ಮಕ್ಕಳೊಂದಿಗೆ ಸಂವಾದದಲ್ಲಿ ಬಾಗಿಯಾಗಿದ್ದರು. ಈ ವೇಳೆ ಶಾಲಾ ಮಕ್ಕಳು ಅಂದಿನ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಶ್ರಿಯೊಮ್ ಕಶ್ಯಪ್ ಎಂಬ ಬಾಲಕ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದರು.

8ನೇ ತರಗತಿ ಓದುತ್ತಿದ್ದ ಶ್ರಿಯೊಮ್ ಕಶ್ಯಪ್ ದೇಶಭಕ್ತಿ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ಬಿಪಿನ್ ರಾವತ್ ನನಗೆ ಕಳೆದ 30 ವರ್ಷಗಳಿಂದ ಮೂರು ಗಂಟೆ ಒಂದೇ ಕಡೆ ಕೂತು ಸಿನಿಮಾ ನೋಡಲು ಸಮಯವೇ ಸಿಕ್ಕಿಲ್ಲವೆಂದು ಹೇಳಿದ್ದರು. ಮೂರು ವರ್ಷಗಳ ಹಿಂದೆ ಜನರಲ್ ಬಿಪಿನ್ ರಾವತ್ ಹೇಳಿದ ಇದೇ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮಕ್ಕಳೊಂದಿಗೆ ನಡೆದಿದ್ದ ಸಂವಾದದಲ್ಲಿ ಜನರಲ್ ಬಿಪಿನ್ ರಾವತ್ ಕೂಡ ಮಕ್ಕಳಿಗೆ ಹುರುಪು ತುಂಬಿದ್ದರು. ಶಾಲೆಯ ಕೋಣೆಯೊಳಗಾಗಲಿ ಅಥವಾ ಜೀವನದಲ್ಲಿ ಆಗಲಿ ಸೋಲನ್ನು ಕಂಡರೆ ನಂಬಿಕೆ ಕಳೆದುಕೊಳ್ಳಬೇಡಿ. ಕಠಿಣ ಪರಿಶ್ರಮ ಮಾಡಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ನೀವು ಈ ದೇಶದ ಭವಿಷ್ಯ. ಪ್ರತಿಬಾರಿ ಸೋತಾಗಲೂ ಮತ್ತಷ್ಟು ಹಾರ್ಡ್ ವರ್ಕ್ ಮಾಡಿ. ಯಶಸ್ಸು ಸಿಗುವುದು ಕೇವಲ ಹಾರ್ಡ್‍ನಿಂದ ಮಾತ್ರ ಸಾಧ್ಯವೆಂದು ಜನರಲ್ ಬಿಪಿನ್ ರಾವತ್ ಹೇಳಿದ್ದರು.

ಭಾರತೀಯ ಸೇನಾ ಪಡೆಗಳ ಅಧುನಿಕರಣಕ್ಕೆ ಹೆಚ್ಚು ಒತ್ತು ನೀಡಿದಂತಹ ಭಾರತೀಯ ಸೈನಿಕರ ಶೌರ್ಯ ಸಾಹಸಗಳನ್ನು ಮತ್ತೊಂದು ಹಂತವನ್ನು ಜಗತ್ತಿಗೆ ತೋರಿಸಿದ ಮಹಾನ್ ಸೇನಾನಿಯನ್ನು ಕಳೆದು ಕೊಂಡ ದೇಶ ಬಡವಾಗಿದೆ. ಅವರ ಈ ದೇಶಕ್ಕಾಗಿ ಮಾಡಿದ ಸೇವೆಯು ಭಾರತದ ಚರಿತ್ರೆಯಲ್ಲಿ ಅಜರಾಮರವಾಗಿರುತ್ತದೆ.
ಹೋಗಿ ಬನ್ನಿ ಜನರಲ್ ….