ಮಕ್ಕಳ ಮೇಲೆ ಓಮಿಕ್ರಾನ್ ದೊಡ್ಡ ಪರಿಣಾಮ ಬೀರಲ್ಲ -ಡಾ.ಸುಧಾಕರ್

ಬೆಂಗಳೂರ: ಓಮಿಕ್ರಾನ್ ವೈರಸ್‍  ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ಮೇಲೆ ಓಮಿಕ್ರಾನ್ ತೀವ್ರತೆ ಕಡಿಮೆ ಇರುತ್ತದೆ. ಡೆಲ್ಟಾಗಿಂತಲೂ ಇದರ ಪರಿಣಾಮ ಕಡಿಮೆ. ಆದರೆ, ವೇಗವಾಗಿ ಹರಡುವ ಸಾಧ್ಯತೆಗಳಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಓಮಿಕ್ರಾನ್ ಸೋಂಕು ಬಂದಿರುವವರ ಸಂಪರ್ಕದಲ್ಲಿರುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಜಿನೋವಿಕ್ ಸೀಕ್ವೆನ್ಸ್‍ನಿಂದ ಐವರ ವರದಿ ಬಂದಿಲ್ಲ. ಬೇರೆ ರಾಜ್ಯಗಳ ವರದಿ ಬಂದಿದೆ. ನಮ್ಮ ರಾಜ್ಯದಲ್ಲಿ ಇಬ್ಬರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಯಾವುದೇ ಗುಣಲಕ್ಷಣಗಳು ಕಂಡುಬಂದಿಲ್ಲ, ಸಮಸ್ಯೆಯೂ ತೀವ್ರವಾಗಿಲ್ಲ, ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದರು.

ಕೋವಿಡ್‍ನಿಂದ ರೋಗ ನಿರೋಧಕ ಶಕ್ತಿ ಪಡೆಯಲು ಕೇವಲ ಒಂದು ಡೋಸ್‍ನಿಂದ ಸಾಧ್ಯವಿಲ್ಲ. ಎರಡೂ ಡೋಸ್ ಲಸಿಕೆ ಪಡೆದಾಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಹೀಗಾಗಿ ಕೋವಿಡ್ ಲಸಿಕೆಯನ್ನು ಪೂರ್ಣವಾಗಿ ಪಡೆಯಬೇಕು ಎಂದು ಸುಧಾಕರ್ ಸಲಹೆ ನೀಡಿದರು.

ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ ತೀವ್ರತೆ ಕಡಿಮೆ. ಆದರೆ, ವೇಗವಾಗಿ ಹರಡುತ್ತದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಸೋಂಕು ಕಂಡುಬಂದಿರುವ ರಾಷ್ಟ್ರಗಳಲ್ಲೂ ತೀವ್ರತೆ ಇಲ್ಲ. ಹೀಗಾಗಿ ಆತಂಕ ಪಡಬೇಕಾಗಿಲ್ಲ. ಆದರೆ, ಅಗತ್ಯ ಮುನ್ನೆಚ್ಚರಿಕೆ ವಹಿಸಲೇಬೇಕು ಎಂದು ತಿಳಿಸಿದರು.

ಜನವರಿಯಲ್ಲಿ ಮೂರನೆ ಅಲೆ ಬರಬಹುದು ಎಂಬ ತಜ್ಞರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸವನ್ನು ಪರಿಗಣಿಸಿದರೆ ಮೊದಲ ಅಲೆಗಿಂತ ಎರಡನೆ ಅಲೆ ತೀವ್ರವಾಗಿರುವುದು ಕಂಡುಬಂದಿದೆ. ಮೂರು ಮತ್ತು ನಾಲ್ಕನೆ ಅಲೆಗಳು ಅಷ್ಟೊಂದು ತೀವ್ರತೆ ಹೊಂದಿರುವುದಿಲ್ಲ, ಕಡಿಮೆ ಇರುತ್ತದೆ ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದರು.