ಮಂಡ್ಯ ಜಿಲ್ಲೆಯ ಜೆಡಿಎಸ್‌ ನೆಲೆ ಅಲುಗಾಡಿಸುವುದು ಅಮಿತ್‌ ಶಾ ಕೈಲಿ ಆಗಲ್ಲ -ಹೆಚ್.ಡಿ.ಕೆ.

ಬೆಂಗಳೂರು: ಮಂಡ್ಯ ಜಿಲ್ಲೆ ಜೆಡಿಎಸ್‌ ಪಕ್ಷದ ನೆಲೆಯನ್ನು ಅಲುಗಾಡಿಸುವುದು ಯಾರಿದಂಲೂ ಸಾಧ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶಗೌಡರು ಹಮ್ಮಿಕೊಂಡಿದ್ದ ನಾಗಮಂಗಲ ಕ್ಷೇತ್ರದ ನಿವಾಸಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯಕೆ ಬಂದು ದೇವೆಗೌಡರ ಕೋಟೆಗೆ ಡೈನಾಮೆಟ್ ಇಟ್ಟು ಹೊಡಿತಾರಂತೆ. ಯಾರೇ ಬಂದರೂ ದೇವೆಗೌಡರ ಕೋಟೆ ಅಲುಗಾಡಿಸಲು ಆಗುವುದಿಲ್ಲ, ಈ ಅಮಿತ್ ಶಾಗೆ ಏನು ಗೊತ್ತು ಮಂಡ್ಯದ ಬಗ್ಗೆ. ಸಚಿವ ಅಶ್ವತ್ಥನಾರಾಯಣರಿಗೇನು ಗೊತ್ತು ಈ ಜಿಲ್ಲೆಯ ಬಗ್ಗೆ ಎಂದು ಅವರು ಪ್ರಶ್ನಿಸಿದರು.

ಕಾವೇರಿ ನೀರಿನ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುವ ಸಂದರ್ಭ ಬಂದಾಗ ಸಂಸತ್ತಿನಲ್ಲಿ ಹೋರಾಟ ಮಾಡಿದ ಏಕೈಕ ವ್ಯಕ್ತಿ ದೇವೆಗೌಡರು. ಆ ಜಿಲ್ಲೆಯಲ್ಲಿ ಬಿಜೆಪಿಯ ಪಾಪದ ಹಣ ತಂದು ಕೆ.ಆರ್ ಪೇಟೆ ಗೆದ್ದ ಹಾಗಲ್ಲ ಈ ಬಾರಿಯ ಚುನಾವಣೆ ಎಂದು ಹೇಳಿದರು.

ನೀವು ಬೆಳೆಸಿದ ಮನೆಮಗ ಎಂಬ ಅಭಿಮಾನ ನನ್ನ ಮೇಲೆ ಇಟ್ಟುಕೊಂಡಿದ್ದರೆ ನನ್ನನ್ನು ಕೈ ಬಿಡಬೇಡಿ. ನಿಮ್ಮ ಮನೆ ಮಕ್ಕಳಿಗೆ ವಿಷ ಹಾಕುವ ಹುನ್ನಾರಕ್ಕೆ ಬೆಂಬಲ ನೀಡಬೇಡಿ ಎಂದು ಮಂಡ್ಯ ಜನರಲ್ಲಿ ಮಾಜಿ ಮುಖ್ಯಮಂತ್ರಿ ಮನವಿ ಮಾಡಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಲ್ಲಬೇಡ ಎಂದು ನಿಖಿಲ್ ಕುಮಾರಸ್ವಾಮಿಗೆ ಹೇಳಿದೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‌, ಬಿಜೆಪಿ, ರೈತಸಂಘ ಎಲ್ಲರೂ ಸೇರಿ ಸ್ವಾಭಿಮಾನದ ಹೆಸರಿನಲ್ಲಿ ಕುತಂತ್ರದಿಂದ ಸೋಲಿಸಿದರು. ಈಗ ಆ ಸ್ವಾಭಿಮಾನ ನರೇಂದ್ರ ಮೋದಿ ಅವರ ಕಾಲಡಿ ಹೋಗಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

ನಾನು ಪಲಾಯನವಾದಿಯಲ್ಲ, ಈ ಹೋರಾಟದ ಮೂಲಕ ಏಕಾಂಗಿಯಾಗಿ ಮಂಡ್ಯ ಜನತೆಗೆ ಸಂದೇಶ ಕೊಡಲು ಬಯಸುತ್ತೇನೆ. ಒಂದು ಕಡೆ ನಾನು ಒಬ್ಬ, ಆದರೆ ಕಾಂಗ್ರೆಸ್‌- ಬಿಜೆಪಿಯಲ್ಲಿ ಅಕ್ಷೋಣಿ ಸೈನ್ಯಗಳಿವೆ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು. 

ಜೆಡಿಎಸ್‌ ಪಕ್ಷವನ್ನು ಮುಗಿಸುತ್ತೇವೆ ಎಂದು ಹೊರಟವರಿಗೆ ಉತ್ತರ ನೀಡಲು 123 ಸ್ಥಾನ ಗೆಲ್ಲಲು ಹೊರಟಿದ್ದೇನೆ. ಕಾಂಗ್ರೆಸ್‌ ಬಿಜೆಪಿ ಇವೆರಡೂ ಬೇಡ, ಪ್ರಾದೇಶಿಕ ಪಕ್ಷ ಜೆಡಿಎಸ್‌ ಬೇಕು ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ವಿಶ್ವಾಸದಿಂದ ನುಡಿದರು.

ಸಚಿವ ಅಶೋಕ್‌ʼಗೆ ನೇರ ಟಾಂಗ್‌: ಬಿಜೆಪಿಯ ಸಾಬೂನು ಕಾರ್ಖಾನೆ ಅಧ್ಯಕ್ಷರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಆದರೆ ಸಚಿವ ಅಶೋಕ್ ಅವರು ಗಾಜಿನ ಮನೆಯಲ್ಲಿ ಕೂತು ರಾಮನಗರಕ್ಕೆ ಬಂದು ನನ್ನನ್ನು ಕೆಣಕಿದ್ದೀರಿ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮೂರನ್ನೂ ಗೆಲ್ಲಿಸುತ್ತೇವೆ ಎಂದು ಹೇಳಿದ್ದೀರಿ. ನಿಮ್ಮ ದುಡ್ಡಿಗೆ ಮರುಳಾವಗುವ ಜನ ರಾಮನಗರದವರಲ್ಲ. ಸ್ವಲ್ಪ ತಗ್ಗಿಬಗ್ಗಿ ನಡೆಯಿರಿ, ಬಿಜೆಪಿಯನ್ನು ಈ ಬಾರಿ ಜನ ಮನೆಗೆ ಕಳುಹಿಸುತ್ತಾರೆ. ನೀವು ಕೂಡ ಮನೆಗೆ ಹೋಗುತ್ತೀರಿ. ಅಶೋಕ್ ಅವರೇ ನೀವು ನನ್ನಿಂದ ನೀವು ಉಳಿದಿರಿ, ಅದು ನೆನಪಿರಲಿ ಎಂದು ಟಾಂಗ್‌ ಕೊಟ್ಟ ಮಾಜಿ ಮುಖ್ಯಮಂತ್ರಿಗಳು.

ಸಚಿವರೊಬ್ಬರಿಗೆ ಹಣ ಹೋಗುವುದಿತ್ತು: ನರೇಂದ್ರ ಮೋದಿ ಅವರಿಗೆ ಇನ್ನು 25 ವರ್ಷ ಅಧಿಕಾರ ಬೇಕಂತೆ. ಅಮಿತ್ ಶಾ ಬಂದು ದೇವೆಗೌಡರ ಕುಟುಂಬವನ್ನು ಎಟಿಎಂ ಅಂದರು. ಅವರಿಗೆ ಸರಿಯಾಗಿ ಕೊಟ್ಟಿದ್ದೇನೆ. ಒಂದೇ ಒಂದು ಪ್ರಕರಣ ತೋರಿಸಿ. ಈಗ ಮಾಡಾಳು ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಅದರಲ್ಲಿ ಸ್ವಲ್ಪ ಹಣ ಸಚಿವರೊಬ್ಬರಿಗೆ ಹೋಗಬೇಕಿತ್ತು. ಆ ಹಣ ಸೀಜ್‌ ಆಗಿದೆ ಎಂದು ಕುಮಾರಸ್ವಾಮಿ ಅವರು ಬಿಜೆಪಿಗೆ ಚುರುಕು ಮುಟ್ಟಿಸಿದರು.

ನಾನು ತಾಜ್ ವೆಸ್ಟ್ ಎಂಡ್ ಹೋಟೆಲ್ʼನಲ್ಲಿ ಇದ್ದೆ ಎಂದು ಅಪಪ್ರಚಾರ ನಡೆಸಿದರು. ಕಾವೇರಿ ನಿವಾಸವನ್ನು ಮಾಜಿ ಸಚಿವಾ ಜಾರ್ಜ್ ಹೆಸರಿನಲ್ಲಿ ಸಿದ್ದರಾಮಯ್ಯ ಇಟ್ಟುಕೊಂಡಿದ್ದರು. ಆಗ ನಾನು ಸ್ವಲ್ಪ ವಿಶ್ರಾಂತಿಗಾಗಿ, ಊಟಕ್ಕೆ ತಾಜ್ ವೆಸ್ಟ್ ಎಂಡ್ʼಗೆ ಹೊದರೆ ಅದನ್ನೇ ದೊಡ್ಡ ವಿಷಯ ಮಾಡಿದರು. ನನಗೆ ಕಾಂಗ್ರೆಸ್ಸಿನ ಯಾವ ಮಂತ್ರಿಯೂ ಸಹಕಾರ ನೀಡಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಶಾಸಕ ಸುರೇಶ್‌ ಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಪ್ಪಾಜಿ ಗೌಡ ಮುಂತಾದವರು ಹಾಜರಿದ್ದರು.