ಮಂಗಲ್ ಪಾಂಡೆ ಎಂಬ ಹೆಸರು ಭಾರತೀಯ ಪಾಲಿಗೆ ಅಚ್ಚಳಿಯದ ನೆನಪು

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಬಲಿದಾನಗಳು, ಹೋರಾಟಗಳು ನಡೆದಿವೆ. ಪ್ರತಿ ಹೋರಾಟವು ಒಂದೊಂದು ಘಟನೆಗಳಿಗೆ ಸಾಕ್ಷಿಯಾಗಿವೆ.

ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣ ತ್ಯಾಗಗೈದಿದ್ದಾರೆ. ಅವರಲ್ಲಿ
ಮೊದಲ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆಗೆ ನಾಂದಿ ಹಾಡಿದ, ಕ್ರಾಂತಿಕಾರಿ ಸೈನಿಕ, ಭಗತ್ ಸಿಂಗ್ ಗೆ ಸ್ಫೂರ್ತಿಯಾಗಿದ್ದ , ಬ್ರಿಟೀಷರ ವಿರುದ್ಧ ಮೊದಲ ಬಾರಿಗೆ ದೇಶದಾದ್ಯಂತ ಹೋರಾಡಲು ಮತ್ತು 1857 ನೇ ಸಿಪಾಯಿದಂಗೆಗೆ ಪ್ರೇರಣೆಯಾದ ಕ್ರಾಂತಿಕಾರಿ.

ಮಂಗಲ್ ಪಾಂಡೆ ಜನ್ಮ ದಿನವಿಂದು, ಅವರ ಧೈರ್ಯ, ದೇಶಭಕ್ತಿಯನ್ನು ನೆನಪಿಸಿಕೊಳ್ಳುವುದಕ್ಕೆ ಇದೊಂದು ಸುಸಂದರ್ಭ.
ಮಂಗಲ್ ಪಾಂಡೆ ಹುಟ್ಟಿದ್ದು, ಜುಲೈ 19, 1827 ರಲ್ಲಿ. ಈಗಿನ ಉತ್ತರ ಪ್ರದೇಶದ ಬಾಲ್ಲಿಯಾ ಜಿಲ್ಲೆಯ ನಾಗ್ವಾ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ಕುಟುಂಬದ ದಿವಾಕರ್ ಪಾಂಡೆ, ಅಭೈರಾಣಿ ಪಾಂಡೆ ದಂಪತಿಗಳ ಮಗನಾಗಿ ಜನಿಸಿದ ಮಂಗಲ್ ಪಾಂಡೆ.

ಮಂಗಲ್ ಪಾಂಡೆ ತನ್ನ 22ನೇ ವರ್ಷದಲ್ಲಿ ಬ್ರಿಟಿಷ್ ಮಿಲಿಟರಿ ಕಂಟೋನ್ಮೆಂಟ್ನಲ್ಲಿ 34ನೇ ಬಂಗಾಳ ಸ್ಥಳೀಯ ಕಾಲಾಳುಪಡೆಯ 1446 ಕಾಲಾಳುಪಡೆ ಸೈನಿಕರಾಗಿ ಸೇರಿದರು.
ಮಂಗಲ್ ಪಾಂಡೆ ಹೆಸರು ಇತಿಹಾಸದಲ್ಲಿ ಅಜರಾಮರವಾಗುವುದಕ್ಕೆ ಸಂದರ್ಭ ಸೃಷ್ಟಿಯಾಗಿದ್ದು, 1857 ಮಾರ್ಚ್ ನಲ್ಲಿ. ಬೆಂಗಾಲ್ ನೇಟಿವ್ ಇನ್ ಫೇಂಟ್ರಿಯ 34ನೇ ರೆಜಿಮೆಂಟ್ ನ ಸಿಪಾಯಿಯಾಗಿದ್ದ ಸಂದರ್ಭದಲ್ಲಿ ಬ್ರಿಟೀಶ್ ಸರ್ಕಾರ ಹೊಸದಾಗಿ ಪರಿಚಯಿಸಿದ್ದ ಎನ್ಫೀಲ್ಡ್ ಪಿ-53 ರೈಫಲ್ ಗಳ ಬುಲೆಟ್ ಕಾರ್ಟ್ರಿಜ್ ಗೆ ಹಸು ಮತ್ತು ಹಂದಿಯ ಮಾಂಸವನ್ನು ಸವರಬೇಕಿತ್ತು. ಮತ್ತು ಕಾಟ್ರಿಜ್ ನ ಹಿಂಭಾಗವನ್ನು ಕಚ್ಚಬೇಕಿತ್ತು.
ಈ ವಿಷಯ ತಿಳಿಯುತ್ತಿದ್ದಂತೆಯೇ ಸೇನೆಯಲ್ಲಿದ್ದ ಹಿಂದು ಮತ್ತು ಮುಸ್ಲಿಂ ಸೈನಿಕರು ಉದ್ರಿಕ್ತರಾಗಿದ್ದರು. ಏಕೆಂದರೆ ಹಸು ಹಿಂದುಗಳಿಗೆ ಪೂಜನೀಯ. ಹಂದಿ ಎಂದರೆ ಮುಸ್ಲಿಮರಿಗೆ ವರ್ಜ್ಯ. ಎರಡು ಮತಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಇಂಥ ಕೆಲಸ ಸಾಧ್ಯವಿಲ್ಲ ಎಂದು ಸಿಪಾಯಿಗಳು ವಿರೋಧಿಸಿದ್ದರು.

ಬ್ರಿಟೀಶ್ ರ ವಿರುದ್ಧ ಭಾರತೀಯರಿಗಿದ್ದ ಅಸಹನೆ, ತಿರಸ್ಕಾರ ಬಿಸಿರಕ್ತಕ್ಕೆ ನೆಪವೊಂದು ಬೇಕಿತ್ತು. ಇದೇ ವಿಷಯವನ್ನಿಟ್ಟುಕೊಂಡು ಮಂಗಲ್ ಪಾಂಡೆ, 1857, ಮಾರ್ಚ್ 29ರಂದು ಬ್ರಿಟಿಶ್ ಅಧಿಕಾರಿ ಮೇಜರ್ ಹ್ಯೂಸನ್ ಮತ್ತು ಲೆಫ್ಟಿನಂಟ್ ಭಾಘ್ ಮೇಲೆ ಗುಂಡಿನ ದಾಳಿ ನಡೆಸಿ ಅವರಿಬ್ಬರನ್ನೂ ನೆಲಕ್ಕುರುಳಿಸಿದ್ದರು. ನಂತರ ಬ್ರಿಟೀಶ್ ಸೇನೆ ಮಂಗಲ್ ಪಾಂಡೆಯವರನ್ನು ಬಂಧಿಸಿತ್ತು.

ಈ ಸಂದರ್ಭದಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುವುದಕ್ಕೆ ಹೊರಟ ಪಾಂಡೆ ಪ್ರಯತ್ನವೂ ಕೈಗೂಡಲಿಲ್ಲ. ಗಾಯಗೊಂಡಿದ್ದ ಪಾಂಡೆಯವರನ್ನು ಬ್ರಿಟೀಶ್ ಸರ್ಕಾರದ ಆದೇಶದ ಮೇರೆಗೆ ಏಪ್ರಿಲ್ 8 (1857)ರಂದು ಬ್ಯಾರಕ್ಪುರ(ಕೋಲ್ಕತ್ತ)ದಲ್ಲಿ ಗಲ್ಲಿಗೇರಿಸಲಾಯಿತು.

ಅದರೆ ಪಾಂಡೆಯವರನ್ನು ಅಂದು ಗಲ್ಲಿಗೇರಿಸಲು ಬ್ಯಾರಕ್ಪುರದಲ್ಲಿ ಯಾರೊಬ್ಬರೂ ಒಪ್ಪದೆ, ಕೊನೆಗೆ ಕೋಲ್ಕತ್ತಾದಿಂದ ನಾಲ್ವರು ನೇಣುಹಾಕುವವರನ್ನು ಕರೆಯಿಸಲಾಯ್ತು, ಬ್ಯಾರಕ್ಪುರದ ಜನತೆಗೆ ಎಷ್ಟು ಮಂಗಳ್ ಪಾಂಡೆಯ ಮೇಲಿನ ಅಭಿಮಾನ ಎಂತಹದು ಎಂಬುದಕ್ಕೆ ಸಾಕ್ಷಿಯಾಗಿತ್ತು. ಸ್ವಾತಂತ್ರ್ಯ ಹೋರಾಟದ ಸಾಧ್ಯತೆಗಳನ್ನು ಪರಿಚಯಿಸಿದ, ಬ್ರಿಟೀಶ್ ಸರ್ಕಾರಕ್ಕೆ ನಡುಕ ಹುಟ್ಟಿಸಿದ ಮಂಗಲ್ ಪಾಂಡೆಯವರ ಜನ್ಮ ದಿನವನ್ನು ನನೆಯುವುದರ ಮೂಲಕ ಆ ಮಹಾ ಚೇತನ ಕ್ಕೆ ನಮಿಸೋಣ.