ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಕಾಲ ಕಾಲಕ್ಕೆ ಸಮಾಜವನ್ನು ಸರಿದಾರಿಗೆ ತರುವ ಕಾರ್ಯವನ್ನು ಯೋಗಿಗಳು, ಸಂತರು, ವಚನಕಾರರು, ದಾಸರು, ತತ್ವಪದಕಾರರು ಮಾಡುತ್ತಾಲೇ ಬಂದಿದ್ದಾರೆ.
ಅಂತಹವರಲ್ಲಿ ೧೪ನೆಯ ಶತಮಾನದ ಆಂಧ್ರಪ್ರದೇಶದ ಕವಿ ಸಮಾಜ ಚಿಂತಕ; ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ಯೋಗಿ ವೇಮನರು ಒಬ್ಬರು.
ಕನ್ನಡಿಗರಿಗೆ ಸರ್ವಜ್ಞ, ತಮಿಳಿರಿಗೆ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನರು, ದಿಗಂಬರರಾಗಿ ಊರೂರು ಅಲೆಯುತ್ತಾ ಭಿಕ್ಷೆ ಬೇಡುತ್ತಾ ಲೋಕ ಸಂಚಾರಿಯಾಗಿ ಜನರ ಬದುಕನ್ನು ಸಮಾಜದ ಅಂಕುಡೊಂಕನ್ನು ತಮ್ಮ ಪದ್ಯಗಳಲ್ಲಿ -“ಕೇಳು ವೇಮನ” ಎಂಬ ಅಂಕಿತನಾಮದೊಂದಿಗೆ ಹೇಳುತ್ತಾ ಸಾವಿರಾರು ಪದ್ಯಗಳನ್ನು ರಚಿಸಿದರು.
ಅಂತಹ ಸಂತ, ತತ್ವಜ್ಞಾನಿ, ಯೋಗಿ, ವೇಮನರ ೬೧೦ನೇ ಜಯಂತಿವಿಂದು.
ಇವರ ಪದ್ಯಗಳನ್ನು ಬೆಳಕಿಗೆ ತಂದವರು ಬ್ರಿಟಿಷ್ ಆಧಿಕಾರಿಯಾಗಿದ್ದ ಸಿ ಪಿ ಬ್ರೌನ್. ಇವರು ವೇಮನ ಪದ್ಯಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡಿ ಜಗತ್ತಿನಾದ್ಯಂತ ಪರಿಚಯಿಸಿದರು. ಕಡಪ ವಿಶ್ವವಿದ್ಯಾಲಯ ಸಮಾರು ೧೫ ಸಾವಿರ ಯೋಗಿ ವೇಮನರ ಪದ್ಯಗಳನ್ನು ಪ್ರಕಟಿಸಿದ್ದಾರೆ.
ವೇಮನ ಕ್ರಿ.ಶ. 1421ರಲ್ಲಿ ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲಮಾಂಬೆ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ವೇಮನ ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದಾರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ. ಪರಸ್ತ್ರೀ ಸಂಗದಲ್ಲಿ ವಿಷಯಾಸಕ್ತನಾದ ವೇಮನ ಭೋಗಾಸಕ್ತನಾಗುತ್ತಾನೆ. ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿ, ಮನೆಯ ಸಂಪತ್ತನ್ನೆಲ್ಲಾ ಹಾಳುಗೆಡವುತ್ತಾನೆ. ವೇಮನನಿಗೆ ಅತ್ತಿಗೆಯಾಗಿ ಬಂದ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲಳಾಗುತ್ತಾಳೆ.
ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ.
“ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನ ಆಕೆಯ ನಗ್ನದೇಹವನ್ನು ತದೇಕ ಚಿತ್ತನಾಗಿ ನೋಡಬೇಕು”. ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ.
ವೇಮನ ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯಭಾವನೆ ಆವರಿಸಿ ಒಡನೆಯೇ ಗಾಬರಿಗೊಂಡು ಕಣ್ಮುಚ್ಚಿ ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ ವಿಶ್ವತೋಭಿರಾಮ ಕೇಳು ವೇಮ||-ಎಂದು ತತ್ವ್ತಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೊರಟವನು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.
ತಂದೆತಾಯಿಯರಲಿ ದಯೆತೋರದ ಪುತ್ರ
ಹುಟ್ಟಲೇನು? ಮತ್ತೆ ಸತ್ತರೇನು?
ಹುತ್ತದಲಿ ಗೆದ್ದಲು ಹುಟ್ಟವೇ? ಸಾಯವೇ?
ವಿಶ್ವದಾಭಿರಾಮ ಕೇಳು ವೇಮ||.
ಆತ್ಮಶುದ್ಧಿ ಇರದ ಆಚಾರವೇತಕೆ?
ಮಡಕೆ ಶುದ್ಧಿ ಇರದ ಅಡಿಗೆ ಯಾತಕೆ?
ಚಿತ್ತಶುದ್ಧಿ ಇರದ ಶಿವನ ಪೂಜೆ ಯಾಕೆ?
ವಿಶ್ವದಾಭಿರಾಮ ಕೇಳು ವೇಮ||.
ಒಂದು ತೊಗಲು ತಂದು ಚೆಂದ ಗೊಂಬೆಯ ಮಾಡಿ
ಕುಣಿವಂತೆ ಮಾಡಿ ಹಾಗೆ ಇಡುವ
ತನ್ನ ಆಡಿಸುವವನ ತಾನೇಕೆ ಕಾಣನೊ
ವಿಶ್ವದಾಭಿರಾಮ ಕೇಳು ವೇಮ||
ಮಿಥ್ಯ ತಿಳಿವಿನಿಂದ ಮೋಕ್ಷ ದೊರಕಬಹುದೆ?
ಕೈಲಾಗದ ಕೆಲಸ ಗೆಯ್ಯಬೇಡ
ಗುರುವು ಎನ್ನಬೇಡ ಗುಣಹೀನನಾಗಿರೆ
ವಿಶ್ವದಾಭಿರಾಮ ಕೇಳು ವೇಮ|| –
ಈ ಎಂಬ ವಚನಗಳನ್ನು ರಚಿಸುತ್ತಾ ಜಗಕೆ ಬೆಳಕಾದರು,
ವೇಮನರ ಸಾಹಿತ್ಯವು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಜೀವನದಲ್ಲಿ ಪ್ರತಿಕೂಲ ಪ್ರಸಂಗ ಬಂದಾಗ ಅವರ ಕವಿತೆಗಳು ಸಾಂತ್ವಾನ ಹೇಳುತ್ತವೆ. ಅವುಗಳನ್ನು ಓದುವ ಜನರಿಗೆಲ್ಲ ಪ್ರಸನ್ನತೆಯನ್ನು ತಂದುಕೊಡುತ್ತದೆ.
ಸಮಾಜದಲ್ಲಿ ದಿನನಿತ್ಯ ನಡೆಯುವ ಜಾತಿ ಸಂಘರ್ಷ, ಮೇಲು ಕೀಳುಗಳ ತಾರತಮ್ಯ, ನೋವು ಕ್ರೌರ್ಯಗಳಿಗೆ ವೇಮನರ ಸಾಹಿತ್ಯದಲ್ಲಿ ಉತ್ತರವಿದೆ.
ಹಣ, ಆಸ್ತಿ, ಕಾಮ, ಹಿಂಸೆಗಳಿಂದ ನಮ್ಮ ಕೌಟುಂಬಿಕ ವ್ಯವಸ್ಥೆ ಅಸ್ತವ್ಯಸ್ತವಾಗುವ ರೂಢಿಗತ ಶೋಷಣೆಯನ್ನು ವೇಮನರು ದಿಕ್ಕರಿಸಿದ್ದಾರೆ.
ಈ ನೋವುಗಳಿಗೆ ಉತ್ತರಿಸಲು ಎಲ್ಲ ಕಾಲ ಘಟ್ಟಕ್ಕೂ ಅನ್ವಯಿಸುವಂತೆ ವೇಮನರು ಕಾವ್ಯವನ್ನು ಬರೆದಿದ್ದಾರೆ. ತಪ್ಪು ಮಾಡುವವರಿಗೆ ಎಚ್ಚರಿಸಿದ್ದಾರೆ. ಆದ್ದರಿಂದ ಅವರ ಕಾವ್ಯ ಎಲ್ಲ ಕಾಲಕ್ಕು ಎಲ್ಲ ಜನಾಂಗಕ್ಕೂ ಅನ್ವಯಿಸುವಂತದ್ದು.
ಜನರೊಂದಿಗೆ ಬೆರೆತು ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲಿರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸುವುದಲ್ಲದೆ ಆ ನ್ಯೂನತೆಗಳನ್ನು ಸರಿಪಡಿಸಿಕೊಂಡು ಹೇಗೆ ಬದುಕಬೇಕೆಂದು ವೇಮನರ ಕವಿತೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ.
ವೇಮನರು ಸಂತೆಯೊಳಗಿದ್ದ ಸಂತಕವಿ, ಕಾಲಾತೀತ ಕವಿ, ಮಾನವನ ಅಂತರಂಗ ಬಹಿರಂಗದ ಬಗ್ಗೆ ವಿಶ್ಲೇಸುತ್ತ ಬದಲಾವಣೆಯಾಗಲು ಇಂಬುಕೊಡುತ್ತಾನೆ.
ತತ್ವಜ್ಞಾನಿಯಾಗಿ, ಗುರುವಾಗಿ, ಹಿತೈಷಿಯಾಗಿ, ಗೆಳೆಯನಾಗಿ, ಬಂಧುವಾಗಿ, ಯೋಗಿಯಾಗಿ, ದೇವರ ಭಕ್ತನಾಗಿ, ನಮಗೆ ಮಾರ್ಗದರ್ಶನ ನೀಡುತ್ತಾನೆ. ವಿಚಾರ ಮಾಡಲು ಹಚ್ಚುತ್ತಾನೆ, ಕವಿಯಾಗಿ ನಮ್ಮನ್ನು ಕಾಡುವರು. ಆದ್ದರಿಂದ ವೇಮನರು ಇಂದಿಗೂ ಪ್ರಸ್ತುತನಾಗಿದ್ದಾರೆ.
ಕೊಂಡವೀಡು ಪಟ್ಟಣ, ರಾಯಲಸೀಮೆ ಪ್ರದೇಶದಲ್ಲಿ ಸುತ್ತಿ, ಪ್ರಚಾರ ಮಾಡಿ ಶಾರ್ವರಿ ನಾಮ ಸಂವತ್ಸರ ಶ್ರೀರಾಮನವಮಿ ದಿನದಂದು 1480ರಲ್ಲಿ ವೇಮನರು ಇಹಲೋಕ ತ್ಯಜಿಸಿದರು.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಕದಿರು ತಾಲ್ಲೂಕಿನ ಕಟಾರುಪಳ್ಳಿಯಲ್ಲಿ ಅವರ ಸಮಾಧಿ ಇದ್ದು ಪ್ರತಿವರ್ಷ ಜಾತ್ರೆ ನಡೆಯುತ್ತದೆ.
ಅವರ ಸಮಾಧಿ ಜ್ಞಾನೋಪಾಸಕರಿಗೆ, ಅತ್ಮದರ್ಶನಾಕಾಂಕ್ಷಿಗಳಿಗೆ ಪವಿತ್ರ ಯಾತ್ರಾ ಸ್ಥಾನವಾಗಿದೆ.
ವೇಮನರ ತತ್ತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಬೇಕು. ಶಾಂತಿ, ಸಮತೆ, ಸೌಹಾರ್ದತೆಯ ಪರಿಮಳ ಜನಮನದಲ್ಲಿ ಪಸರಿಸುವಂತಾಗಬೇಕು ಎನ್ನುವ ಉದಾತ್ತ ಧ್ಯೇಯದೊಂದಿಗೆ ವೇಮನರ ಜಯಂತ್ಯೋತ್ಸವವನ್ನು ರಾಜ್ಯ ಸರ್ಕಾರ ಪ್ರತಿ ವರ್ಷ ಜನವರಿ 19ರಂದು ಸರ್ಕಾರಿ ಕಛೇರಿಗಳಲ್ಲಿ ಮತ್ತು ನಾಡಿನಾದ್ಯಂತ ಆಚರಿಸಲಾಗುತ್ತಿದೆ.
ಯೋಗಿ ವೇಮನ ಜಯಂತ್ಯೋತ್ಸದ ಶುಭಾಶಯಗಳು.