ಬೆಳಗಾವಿ: ಯಾರು ಎಷ್ಟೇ ವಿರೋಧಿಸಿದರೂ ನಮ್ಮ ಧರ್ಮ ಉಳಿಸುವುದಕ್ಕಾಗಿ ಮತಾಂತರ ಕಾಯ್ದೆಯನ್ನು ಜಾರಿ ಮಾಡೇ ಮಾಡುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಮತಾಂತರ ಕಾಯ್ದೆ ಪ್ರಶ್ನೆ ಮಾಡಲು ಕಾಂಗ್ರೆಸ್ ನವರು ಯಾರು? ವಿರೋಧ ಪಕ್ಷದಲ್ಲಿ ಇದ್ದೇವಲ್ಲ ಎಂದುಕೊಂಡು ಮಾತ್ರ ವಿರೋಧಿಸುತ್ತಾರೆ. ನಮ್ಮ ಧರ್ಮ ಉಳಿಸುವುದಕ್ಕಾಗಿ ಕಾಯ್ದೆ ಜಾರಿ ಅನಿವಾರ್ಯವಾಗಿದೆ. ಕಾಯ್ದೆ ತಂದೆ ತರುತ್ತೇವೆ, ನಮ್ಮದೇ ಸರ್ಕಾರ ಇದೆ.ಪಾಕಿಸ್ತಾನದಲ್ಲಿ ಆದಂತೆ ಇಲ್ಲೂ ಆಗಲು ಬಿಡುವುದಿಲ್ಲ ಎಂದು ಹೇಳಿದರು.
ಧಮ್ ತೋರಿಸುವುದು ಚುನಾವಣೆಗಳಲ್ಲಿ ಅಲ್ಲ. ಜನರ ಮನಸ್ಸು ಗೆಲ್ಲುವ ವಿಚಾರದಲ್ಲಿ ತೋರಿಸಬೇಕು ಎಂದಿರುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಪದಗಳನ್ನು ಸಿದ್ದರಾಮಯ್ಯ ಬಳಸಬಾರದು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ 6 ರಿಂದ 11 ಕ್ಕೆ ಏರಿದೆ. ಕಾಂಗ್ರೆಸ್ 3, ಜೆಡಿಎಸ್ ನಿಂದ 2 ಸ್ಥಾನಗಳನ್ನು ಕಸಿದುಕೊಂಡಿದ್ದೇವೆ. ಸೋತರೂ ಮೀಸೆ ಮಣ್ಣಾಗಿಲ್ಲ ಅಂತಾರೆ ಕಾಂಗ್ರೆಸ್ ನವರು ಎಂದು ಈಶ್ವರಪ್ಪ ಕಿಡಿಕಾರಿದರು.