ಮತ್ತೆ ಕನ್ನಡಿಗರ ಕೆಣಕಿದ ಮಹಾರಾಷ್ಟ್ರ ಪುಂಡರು

ಬೆಂಗಳೂರು: ಕರ್ನಾಟಕದ ಬಗ್ಗೆ ಪದೇ ಪದೆ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಈಗ ಮತ್ತೆ ಪುಂಡಾಟಿಕೆ ಮಾಡಿ ಕನ್ನಡಿಗರ ತಾಳ್ಮೆ ಪರೀಕ್ಷಿಸಿದೆ.

ಕರ್ನಾಟಕಕ್ಕೆ ಸೇರಿದ ಸಾರಿಗೆ ಬಸ್‍ಗಳ ಮೇಲೆ ಕಲ್ಲು ಎಸೆದಿರುವ ಪುಂಡರು, ಜೈ ಮಹಾರಾಷ್ಟ್ರ,ಕರ್ನಾಟಕದ ಖಾನಾಪುರ, ಬೀದರ್ ಮತ್ತು ಬೆಳಗಾವಿ ನಮ್ಮ ರಾಜ್ಯಕ್ಕೆ ಸೇರಬೇಕೆಂದು ಬರೆಯುವ ಮೂಲಕ ಪುಂಡಾಟಿಕೆ ಮಾಡಿದ್ದಾರೆ.

ಪುಣೆ ಜಿಲ್ಲೆಯ ದೌಂಡ್‍ನಲ್ಲಿ ನಿಪ್ಪಾಣಿ ಔರಂಗಾಬಾದ್ ಬಸ್ ಮೇಲೆ ಜೈ ಮಹಾರಾಷ್ಟ್ರ ಮತ್ತು ಜಾಹಿರ್ ನಿಶೇಧ್ (ಖಂಡನೆ) ಎಂಬ ಪದಗಳನ್ನು ಕಿತ್ತಳೆ ಮತ್ತು ಕಪ್ಪು ಬಣ್ಣದಲ್ಲಿ ಬರೆದಿದ್ದಾರೆ.

ಬಸ್ ಮೇಲೆ ಮಹಾರಾಷ್ಟ್ರಕ್ಕೆ ಬೆಂಬಲ ನೀಡುವ ಘೋಷಣೆಗಳನ್ನು ಬರೆದ ನಂತರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ಘೋಷಣೆ ಕೂಗಿದ್ದಾರೆ.

ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ‌ ಎಂದು ಮಹಾರಾಷ್ಟ್ರ ಉಪ ಮುಖ್ಯ ಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದು ಕನ್ನಡಿಗರು ಆಕ್ರೋಶ ಗೊಳ್ಳುವಂತೆ ಮಾಡಿದೆ.

ಮಹಾರಾಷ್ಟ್ರ ಸರ್ಕಾರ 2004ರಿಂದಲೂ ಎರಡೂ ರಾಜ್ಯಗಳ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದೆ.

ಆದರೆ ಇದುವರೆಗೂ ಯಶಸ್ವಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ. ನಾವು ನಮ್ಮ ಕಾನೂನು ಹೋರಾಟವನ್ನು ಪ್ರಬಲವಾಗಿ ಮಾಡಲು ಸನ್ನದ್ದರಾಗಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.