ಎಂಇಎಸ್ ಪುಂಡರ ಹಾವಳಿ ಹೆಚ್ಚಳ: ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತ

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ‌ ಎಂಇಎಸ್ ಕಾರ್ಯಕರ್ತರ ಹುಚ್ಚಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಸಾರಿಗೆಬಸ್ ಗಳಿಗೆ ಮತ್ತೆ ಮಸಿ ಬಳಿದಿದ್ದಾರೆ.

ಅದರಲ್ಲೂ ಸಾರಿಗೆ ಸಂಸ್ಥೆಯ ಬಸ್​ಗಳನ್ನು ಟಾರ್ಗೆಟ್ ಮಾಡಿರುವ ಕಿಡಿಗೇಡಿಗಳು ಕಪ್ಪು ಮಸಿ ಬಳಿದು, ಸಂಚಾರಕ್ಕೆ ತಡೆ ಮಾಡುತ್ತಿದ್ದಾರೆ. ಹೀಗಾಗಿ, ಕಲ್ಯಾಣ‌ ಕರ್ನಾಟಕ ಸಾರಿಗೆ ಸಂಸ್ಥೆ  ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಬಂದ್​ ಮಾಡಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಮಹಾರಾಷ್ಟ್ರಕ್ಕೆ ಹೊರಡುತ್ತಿದ್ದ ಎಲ್ಲಾ ಬಸ್​ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ.

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟು ಹಾಕಿದ ಪ್ರಕರಣದ ನಂತರ ಎರಡೂ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ.

ಕಲಬುರಗಿ ಡಿಪೋದ ಬಸ್​ಗಳನ್ನು ನೆರೆಯ ಮಹಾರಾಷ್ಟ್ರ ರಾಜ್ಯದ ಎಂಇಎಸ್​ ಪುಂಡರು ನಿಲ್ಲಿಸಿ ಬಸ್​ಗೆ ಮಸಿ ಬಳಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ.

ಕರ್ನಾಟಕ ಭಾಗದಿಂದ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಸುಮಾರು 351 ಬಸ್​ಗಳು ಸಂಚಾರ ಮಾಡುತ್ತವೆ. ಇದೀಗ ಬಸ್​ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ನಿತ್ಯವು ಸುಮಾರು 40 ಲಕ್ಷ ರೂಪಾಯಿ ನಷ್ಟ ಸಂಭವಿಸುವಂತಾಗಿದೆ.

ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ಬಸ್​ಗಳು ತೆರಳುತ್ತಿಲ್ಲ.

ಈ ಮಧ್ಯೆ ಕರ್ನಾಟಕದಿಂದ ಮಹಾರಾಷ್ಟ್ರದ ಪುಣೆ, ಸೋಲಾಪುರ‌ಕ್ಕೆ ಹೋಗುವ ಬಸ್​ಗಳನ್ನು ತಡೆದ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಮಸಿ ಬಳಿದಿದ್ದಾರೆ‌.

ಜೊತೆಗೆ ಕಾರುಗಳ ಮೇಲೂ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ. ಆದ್ದರಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ್​ ಕುಮಾರ್  ತಿಳಿಸಿದ್ದಾರೆ.