ಬೆಂಗಳೂರು:ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡುತ್ತಿರುವರನ್ನು ಬಂಧಿಸಿ ಜೈಲಿಗೆ ಕಳುಹಿಸುವಂತೆ ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಅವರು, ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ ಎಂದಿದ್ದಾರೆ.
ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಆದೇಶ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅವರು ಆಗ್ರಹಿಸಿದ್ದಾರೆ.
ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮೊಂಡುವಾದವನ್ನು ಮಂಡಿಸಬೇಡಿ ಎಂದು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿರುವ ಸಿದ್ದರಾಮಯ್ಯ ಅವರು, ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ ಎಂದು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ, ಸಂಯಮದಿಂದ ಶಾಂತಿ-ಸೌಹಾರ್ದತೆ ಕಾಪಾಡಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.