ಬಿಜೆಪಿಯವರ ಮನೆ ಮೇಲೆ ಸಿಬಿಐ ದಾಳಿ ಮಾಡಲಿ ಕೋಟಿ ಕೋಟಿ ಹಣ ಸಿಗದಿದ್ದರೆ ಕೇಳಿ -ಎಂ.ಲಕ್ಷ್ಮಣ್

ಮೈಸೂರು: ಬಿಜೆಪಿಯವರ ಮನೆಗಳ ಮೇಲೆ ಸಿಬಿಐ ದಾಳಿ ಮಾಡಲಿ. ಕೋಟಿ ಕೋಟಿ ಹಣ ಸಿಗದಿದ್ದರೆ ಕೇಳಿ ಎಂದು ಸಿಬಿಐಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸವಾಲು ಹಾಕಿದರು.
ನಗರದಲ್ಲಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಲಕ್ಷ್ಮಣ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನರೇಂದ್ರ ಮೋದಿಯವರೇ ನಿಮಗೆ ನೈತಿಕತೆ ಇದ್ದರೆ ಮೊದಲು ಬಿಜೆಪಿ ಮುಖಂಡರುಗಳ ಹಗರಣವನ್ನು ತನಿಖೆಗೆ ಒಳಪಡಿಸಲು ಆದೇಶಿಸಿ ಎಂದು ಲಕ್ಷ್ಮಣ್ ಒತ್ತಾಯಿಸಿದರು.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕಾರ್ಯವನ್ನು ಸಿಬಿಐ, ಇಡಿ ಸಂಸ್ಥೆಗಳ ಮೂಲಕ ಬಿಜೆಪಿಯವರು ಮಾಡುತ್ತಿದ್ದಾರೆಂದು ಎಂ.ಲಕ್ಷ್ಮಣ್ ಆರೋಪಿಸಿದರು.
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮನೆ ಮೇಲೆ ಮಾತ್ರ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ದಾಳಿ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಕಂಡು ಹೆದರಿ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂತಹ ನೀಚ ರಾಜಕೀಯ ಮಾಡುತ್ತಿವೆ ಎಂದು ಅವರು ದೂರಿದರು.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ. ಸಿಬಿಐ ಇದೀಗ ಚೋರ್ ಬಚಾವ್ ಇನ್ವೆಸ್ಟಿಗೇಷನ್ ಆಗಿದೆ ಎಂದರು. ಡಿ.ಕೆ. ಶಿವಕುಮಾರ್ ಓರ್ವ ಉದ್ಯಮಿಯೂ ಸಹ ಹೌದು. ಹೀ ಇಸ್ ಎ ರಿಯಲ್ ಎಸ್ಟೇಟ್ ಡೆವಲಪರ್. ಅವರ ಮಾಲೀಕತ್ವದಲ್ಲಿ ಹಲವಾರು ಪವರ್ ಪ್ಲಾಂಟ್ ಉದ್ದಿಮೆಗಳು, ಶೈಕ್ಷಣಿಕ ಸಂಸ್ಥೆಗಳಿವೆ. ಅವುಗಳ ಮೂಲಕ ಡಿಕೆಶಿಯವರು ಆದಾಯ ಗಳಿಸುತ್ತಿದ್ದಾರೆ. ಈ ಆದಾಯದ ಮೂಲವನ್ನು ತನಿಖೆ ಮಾಡುವ ಅಧಿಕಾರ ಸಿಬಿಐಗೆ ಇರುವುದಿಲ್ಲ. ಈಗಾಗಲೇ ಅವರ ಆಸ್ತಿ ಗಳಿಕೆ ಪ್ರಕರಣನ್ನು ಇಡಿ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿಜೆ ವಿಜಯ್ ಕುಮಾರ್, ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ವರುಗಳು ಉಸಪ್ಥಿತರಿದ್ದರು.