594 ಕಿ.ಮೀ ಗಂಗಾ ಎಕ್ಸ್ಪ್ರೆಸ್ ವೇ ಗೆ ಮೋದಿ ಶಂಕುಸ್ಥಾಪನೆ

ಲಖ್ನೋ : ಉತ್ತರಪ್ರದೇಶದ ಷಹಜಹಾನ್‍ ಪುರದಲ್ಲಿ 594 ಕಿ.ಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ ವೇ ಗೆ   ಪ್ರಧಾನಿ ನರೇಂದ್ರ ಮೋದಿ ಅವರು  ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಇದು ಆರು ಪಥಗಳ ಎಕ್ಸ್‌ಪ್ರೆಸ್‌ ವೇ ಆಗಿದ್ದು 36,230 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.

ಇದು ಉತ್ತರಪ್ರದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ ವೇ ಆಗಿದ್ದು ಪ್ರಯಾಗ್ ರಾಜ್‍ನ ಜುದಾಪುರ್ ದಂಡು ಗ್ರಾಮದವರೆಗೆ ವಿಸ್ತರಣೆಯಾಗಲಿದೆ.

ಎಕ್ಸ್‌ಪ್ರೆಸ್‌ ಹೆದ್ದಾರಿಗಳ ಉತ್ತಮ ಕಾರ್ಯಜಾಲ ಮತ್ತು ಅಂತರ ಸಂಪರ್ಕದಿಂದಾಗಿ ಉತ್ತರಪ್ರದೇಶದ ಮೂಲೆ ಮೂಲೆಯೂ ಲಖ್ನೋ ಮತ್ತು ದೆಹಲಿಗೆ ಸಂಪರ್ಕಗೊಳ್ಳುತ್ತದೆ.

ಈ ಎಕ್ಸ್‌ಪ್ರೆಸ್‌ ವೇ ಹಾಪುರ್, ಬುಲಂದ್ ಷಹರ್, ಅಮ್ರೋಹಾ, ಸಂಭಾಲ್, ಬದೌನ್, ಷಹಜಹಾನ್‍ಪುರ, ಹರ್ದೋಯಿ, ಉನ್ನಾವ್, ರಾಯ್ ಬರೇಲಿ ಮತ್ತು ಪ್ರತಾಪ್‍ಗಢ ಸೇರಿದಂತೆ ಹನ್ನೆರಡು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.

ಏಳು ರೈಲ್ವೆ ಮೇಲ್ಸೇತುವೆಗಳು, 15 ದೊಡ್ಡ ಸೇತುವೆಗಳು, 126 ಚಿಕ್ಕ ಸೇತುವೆಗಳು, 375 ಅಂಡರ್‍ಪಾಸ್‍ಗಳು ಒಂಭತ್ತು ಸಾರ್ವಜನಿಕ ಸೌಲಭ್ಯ ಕೇಂದ್ರಗಳು, ಎರಡು ಟೋಲ್ ಪ್ಲಾಜಾಗಳು, ರ್ಯಾಂಪ್ ಟೋಲ್ ಪ್ಲಾಜಾಗಳನ್ನು ಗಂಗಾ ಎಕ್ಸ್‌ಪ್ರೆಸ್‌ ವೇನಲ್ಲಿ ನಿರ್ಮಿಸಲಾಗುವುದು.

ಹೆದ್ದಾರಿಯುದ್ದಕ್ಕೂ ಸುಮಾರು 18,55,000 ಮರದ ಸಸಿಗಳನ್ನು ನೆಡಲಾಗುವುದು.

ಗಂಗಾ ಎಕ್ಸ್‌ಪ್ರೆಸ್‌ ಹೆದ್ದಾರಿಯಿಂದಾಗಿ ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕೋದ್ಯಮಗಳಿಗೆ ರೋಹಿಲ್‍ಖಂಡ್ ಮತ್ತು ವಿಂಧ್ಯ ಪ್ರದೇಶಗಳಲ್ಲಿ ಉತ್ತೇಜನ ಸಿಗಲಿದೆ.

ಈ ಹೆದ್ದಾರಿಯು ರಾಷ್ಟ್ರ ರಾಜಧಾನಿಯೊಂದಿಗೆ ಉತ್ಪಾದನಾ ಘಟಕಗಳು, ಅಭಿವೃದ್ಧಿ ಕೇಂದ್ರಗಳು ಮತ್ತು ಕೃಷಿ ಉತ್ಪದನಾ ಕೇಂದ್ರಗಳನ್ನು ಸಂಪರ್ಕಿಸುವ ಮುಖಾಂತರ ಒಂದು ಕೈಗಾರಿಕಾ ಕಾರಿಡಾರ್ ಆಗಿಯೂ ಕಾರ್ಯ ನಿರ್ವಹಿಸಲಿದೆ.