ನವದೆಹಲಿ: ಶಿಕ್ಷಣ ನೀತಿಯಲ್ಲಿ ಸರ್ಕಾರದ ಪ್ರಭಾವ ಕಡಿಮೆ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಇದು ಸರ್ಕಾರದ ಶಿಕ್ಷಣ ನೀತಿಯಲ್ಲ, ದೇಶದ ಶಿಕ್ಷಣ ನೀತಿ. ವಿದೇಶ, ರಕ್ಷಣಾ ನೀತಿ ಹೇಗೆ ದೇಶದ್ದು ಆಗುತ್ತದೆಯೋ ಹಾಗೆಯೇ ಶಿಕ್ಷಣ ನೀತಿ ದೇಶದ್ದು ಎಂದು ಪ್ರಧಾನಿ ಹೇಳಿದರು.
ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಯುವಕರಿಗೆ ಅಗತ್ಯ ಕೌಶಲ್ಯಗಳು ಬೇಕು. ಅದಕ್ಕೆ ಪ್ರಾಯೋಗಿಕ ಕಲಿಕೆಯ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಇದಕ್ಕೆ ಅವಕಾಶ ಕಲ್ಪಿಸಲಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ಸಮಾನ, ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲ ಜ್ಞಾನದ ಸಮಾಜವನ್ನಾಗಿ ರೂಪಿಸಲಿದೆ ಎಂದು ಮೋದಿ ಹೇಳಿದರು.
ಶಿಕ್ಷಣ ನೀತಿ ಓದು, ಬರೆಯುವುದರ ಮೇಲೆ ನಿಂತಿಲ್ಲ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ ಎಂದರು.
ವಿದ್ಯಾರ್ಥಿಗಳ ಕಲಿಕೆ ಪುಸ್ತಕಕ್ಕೆ ಮಾತ್ರ ಸೀಮಿತವಾರಬಾರದು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ ಎಂದು ಪ್ರಧಾನಿ ತಿಳಿಸಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಮುಖ್ಯಸ್ಥ ಕಸ್ತೂರಿ ರಂಗನ್ ಸೇರಿದಂತೆ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.