ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಿ,ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಮಾಹಿತಿ ಕಳುವಿಗೆ ಕಾರಣವಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ನಾಆಗ್ರಹಿಸಿದ್ದಾರೆ.
ಈ ಮತದಾರರ ಮಾಹಿತಿ ಕಳವು ಪ್ರಕರಣದ ಬಗ್ಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.
ಚಿಲುಮೆ ಎಜುಕೇಶನ್ ಇನ್ಸ್ ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆ ಮತದಾರರ ಜಾಗೃತಿ ಹಾಗೂ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದು ಆಗಸ್ಟ್ 19, 2022 ರಂದು ಸರಕಾರಕ್ಕೆ ಅರ್ಜಿ ಹಾಕಿತ್ತು.
ಆಗಸ್ಟ್ 20 ರಂದು ಯಾವುದೇ ಜಾಹೀರಾತು ನೀಡದೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಲಾಯಿತು.
ಈ ಸಂಸ್ಥೆಯವರಿಗೆ ಯಾವುದೇ ಅನುಭವ ಇಲ್ಲದಿದ್ದರೂ ಅನುಮತಿ ನೀಡಲಾಗಿದೆ ಎಂದು ದೂರಿದರು.
ಕಾನೂನಿನ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿ ಹೊರತಾಗಿ ಬೇರೆಯವರು ಬಿಎಲ್ಒ ಆಗಲು ಸಾಧ್ಯವಿಲ್ಲ.
ಚಿಲುಮೆ ಜತೆಗೆ ಇನ್ನೆರಡು ಸಂಸ್ಥೆಗಳಾದ ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಕೂಡ ಭಾಗಿಯಾಗಿವೆ.
ಈ ಎರಡು ಸಂಸ್ಥೆಗಳಿಗೆ ಕೃಷ್ಣಪ್ಪ ರವಿಕುಮಾರ್ ಎಂಬುವವರು ನಿರ್ದೇಶಕರಾಗಿದ್ದಾರೆ.
ಈ ಎರಡು ಸಂಸ್ಥೆಗಳು ಜನರ ಬಳಿ ಹೋಗಿ ನಾವು ಚುನಾವಣಾ ನಿರ್ವಹಣೆ ಕಂಪನಿಯಾಗಿದ್ದು, ನಾವು ಪಕ್ಷಗಳಿಗೆ ಇವಿಎಂ ತಯಾರಿ ಮಾಡುತ್ತೇವೆ ಎಂದು ಹೇಳಿಕೊಂಡಿವೆ.
ನಾವು ಇದುವರೆಗೂ ಇವಿಎಂ ಅನ್ನು ಸರ್ಕಾರ ಮಾಡಲಿದೆ ಎಂದು ಕೇಳಿದ್ದೆವು. ಆದರೆ ಇವಿಎಂ ಅನ್ನು ರಾಜಕೀಯ ಪಕ್ಷಗಳಿಗೆ ಮಾಡಲಾಗುತ್ತದೆ ಎಂದು ಯಾವತ್ತೂ ಕೇಳಿರಲಿಲ್ಲ ಎಂದು ನಾಯಕರು ಹೇಳಿದರು.
ಈ ಸಂಸ್ಥೆಗಳು ಸರ್ಕಾರದ ಎಲ್ಲಾ ವಿಭಾಗಗಳಿಂದಲೂ ತಾತ್ಕಾಲಿಕ ಮತಗಟ್ಟೆ ವ್ಯಕ್ತಿಯನ್ನು ಒದಗಿಸುವುದಾಗಿ ತಿಳಿಸಿವೆ. ಇದೇ ಸಂಸ್ಥೆ ಡಿಜಿಟಲ್ ಸಮೀಕ್ಷಾ ಎಂಬ ಮತದಾರರ ಆಪ್ ಹೊಂದಿದೆ. ಈ ಆಪ್ ಮೂಲಕ ಜನಪ್ರತಿನಿಧಿಗಳಿಗೆ ಸೇವೆ ಒದಗಿಸಲಾಗುವುದು ಎಂದೂ ತಿಳಿಸಿದೆ.
ಬೆಂಗಳೂರಿನ ಎಲ್ಲ ಮತದಾರರ ಮಾಹಿತಿ ಪಡೆದ ನಂತರ ಈ ಸಂಸ್ಥೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದೆ.
ಚುನಾವಣಾ ಆಯೋಗ ನಿಯೋಜಿಸಬೇಕಿದ್ದ ಬೂತ್ ಮಟ್ಟದ ಅಧಿಕಾರಿಗಳನ್ನು ಈ ಸಂಸ್ಥೆ ನಿಯೋಜಿಸಿ ಅಕ್ರಮ ಎಸಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
ಇವರನ್ನು ಸರ್ಕಾರದ ಅಧಿಕಾರಿಗಳೆಂದು ಬಿಂಬಿಸಿ ಮನೆ, ಮನೆಗೂ ಹೋಗಿ ಪ್ರತಿ ಮತದಾರನ ಜಾತಿ, ಲಿಂಗ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ ಅನೇಕ ಮಾಹಿತಿ ಕಲೆಹಾಕಲಾಗಿದೆ.
ಹೀಗೆ ಕಲೆ ಹಾಕಿದ ಮಾಹಿತಿಯನ್ನು ಚುನಾವಣಾ ಆಯೋಗದ ಗರುಡ ಆಪ್ ನಲ್ಲಿ ಆಪ್ ಲೋಡ್ ಮಾಡದೇ, ಖಾಸಗಿ ಸಂಸ್ಥೆಯ ಆಪ್ ಆದ ಡಿಜಿಟಲ್ ಸಮೀಕ್ಷಾದಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ದೂರಿದರು.
ಕೃಷ್ಣಪ್ಪ ರವಿಕುಮಾರ್ ಎಂಬಾತ ಸರ್ಕಾರದ ಹಿರಿಯ ಸಚಿವರ ಆಪ್ತರಾಗಿದ್ದಾರೆ. ಈ ಎಲ್ಲ ಕಂಪನಿಗಳು ಆ ಸಚಿವರ ಮಲ್ಲೇಶ್ವರ ಕ್ಷೇತ್ರದಲ್ಲಿ ಸ್ಥಾಪನೆಯಾಗಿವೆ. ಇವು ಮತದಾರರ ಮಾಹಿತಿ ಕಳವು, ಮಾಹಿತಿ ದುರ್ಬಳಕೆ, ನಂಬಿಕೆ ದ್ರೋಹದ ಅಪರಾಧ, ಪಿತೂರಿ ಅಪರಾಧ ಎಸಗಿವೆ ಎಂದು ತಿಳಿಸಿದರು.
ಕೃಷ್ಣಪ್ಪ ರವಿಕುಮಾರ್ ತಮ್ಮ ಖಾಸಗಿ ಸಂಸ್ಥೆ ಸಿಬ್ಬಂದಿಗೆ ಬಿಎಲ್ಒ ಗುರುತಿನ ಚೀಟಿ ನೀಡಿದ್ದಾರೆ. ಇದು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮಾಡಲಾಗಿರುವ ಅಪರಾಧ. ಇದು ಐಪಿಸಿ ಸೆಕ್ಷನ್ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಹೇಳಿದರು.
ನವೆಂಬರ್ 16, 2022ರಂದು ಈ ಸಂಸ್ಥೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ರದ್ದು ಮಾಡಲು ಕಾರಣ ಏನು ಎಂದು ತಿಳಿಸಿಲ್ಲ.
ನೀವು ಷರತ್ತು ಉಲ್ಲಂಘನೆ ಮಾಡಿದ್ದು ಹೀಗಾಗಿ ಅನುಮತಿ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಇದರ ಹಿಂದೆ ಬಸವರಾಜ ಬೊಮ್ಮಾಯಿ ಅವರು ಇದ್ದಾರೆ. ಈ ಅಕ್ರಮಕ್ಕೆ ಬೊಮ್ಮಾಯಿ ಅವರೇ ನೇರ ಹೊಣೆ ಹಾಗಾಗಿ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಾಯಕರು ಆಗ್ರಹಿಸಿದರು.