ಮುಂಬರುವ ಚುನಾವಣೆಗೂ ಮುನ್ನ ಕಾಂಗ್ರೆಸ್ ಇಬ್ಭಾಗ -ಈಶ್ವರಪ್ಪ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಇಬ್ಭಾಗವಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಸೈಕಲ್ ಜಾಥಾ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಹೋಳಾಗಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಅಧಿಕಾರ ಬೇಕು. ಅದಕ್ಕಾಗಿ ಇಬ್ಬರೂ ಕಚ್ಚಾಡಲಿದ್ದಾರೆ. ಇದಕ್ಕಾಗಿ ಒಂದೂವರೆ ವರ್ಷ ಕಾಯಬೇಕಿಲ್ಲ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಸಿದ್ದರಾಮಯ್ಯಗೆ ಹೇಗಾದರೂ ಸರಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಹುಚ್ಚು. ಡಿ.ಕೆ.ಶಿವಕುಮಾರ್ಗೆ ಬಿಜೆಪಿಯವರನ್ನು ಹೇಗಾದರೂ ಎಳೆದುಕೊಳ್ಳಬೇಕು ಎನ್ನುವ ಹುಚ್ಚು. ಈ ಹುಚ್ಚರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಇದಕ್ಕೆ ಬೇರೆ ಏನು ಉತ್ತರ ಇಲ್ಲ. ಸಿದ್ದರಾಮಯ್ಯರಿಗೆ ಸಿಎಂ ಆಗುವ ಹುಚ್ಚು ಕನಸು. ಅವರು ಮುಖ್ಯಮಂತ್ರಿಯಾಗುವುದಿರಲಿ, ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ ಎಂದು ಈಶ್ವರಪ್ಪ ಹೇಳಿದರು.

ಜಾತಿ ಗಣತಿ ಬಗ್ಗೆ ವಿಧಾನಸಭೆಯಲ್ಲಿ ದನಿ ಎತ್ತುತ್ತೇವೆ, ಹೋರಾಡುತ್ತೇವೆ ಎಂದ ಸಿದ್ದರಾಮಯ್ಯ, ವಿಧಾನಸಭೆ ಮತ್ತು ವಿಧಾನ ಮಂಡಲದಲ್ಲಿ ಜಾತಿ ಗಣತಿ ಬಗ್ಗೆ ಒಂದು ಪದವನ್ನು ಹೇಳಲಿಲ್ಲ. ಸಿದ್ದರಾಮಯ್ಯನವರೇ ಬಾಯಿಯಲ್ಲಿ ಕಡಬು ಇಟ್ಟುಕೊಂಡಿದ್ದರಾ ಎಂದರು.

ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಅಹಿಂದಕ್ಕೆ ಏನು ಮಾಡಲ್ಲ. ಇದು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಅರ್ಥವಾಗಿದೆ. ಹೀಗಾಗಿ, ಅಹಿಂದ ವರ್ಗ ಕಾಂಗ್ರೆಸ್ ಅನ್ನು ಬೆಂಬಲಿಸುವುದಿಲ್ಲ. ಬಿಜೆಪಿಯನ್ನೇ ಗೆಲ್ಲಿಸಲಿದ್ದಾರೆ ಎಂಬುದಕ್ಕೆ ದೇಶ ಮತ್ತು ರಾಜ್ಯದಲ್ಲಿ ಇತ್ತೀಚಿಗೆ ನಡೆದ ಚುನಾವಣೆಗಳೇ ಉದಾಹರಣೆ ಎಂದು ಈಶ್ವರಪ್ಪ ಹೇಳಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮಲಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆ ಅತಂತ್ರಪಡಿಸುವ ಜೆಡಿಎಸ್ ಉದ್ದೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರ ಉದ್ದೇಶವನ್ನು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಕಷ್ಟ, ನೋವನ್ನು ಹೇಳಿಕೊಂಡಿದ್ದಾರೆ. ಅತಂತ್ರ ಸ್ಥಿತಿಯಾದರೆ ಯಾವುದಾದರೂ ಪಕ್ಷದ ಜೊತೆ ಸೇರಿಕೊಂಡು ಆಡಳಿತ ಮಾಡಬಹುದು ಅನ್ನೋ ಭ್ರಮೆಯಲ್ಲಿ ಇದ್ದಾರೆ. ಅತಂತ್ರ ಅನ್ನೋ ಭಾವನೆ ಕುಮಾರಸ್ವಾಮಿ ಅವರಲ್ಲಿ ಇರಬಹುದು ಎಂದರು.