ಬೆಂಗಳೂರು: ರಾಜ್ಯದಲ್ಲಿ ಮುಂಚೂಣಿ ಕಾರ್ಯಕರ್ತರ ಮುನ್ನೆಚ್ಚರಿಕೆ ಲಸಿಕಾರಣದಲ್ಲಿ 39% ಪ್ರಗತಿಯಾಗಿದ್ದು, ಇದು ನಿರೀಕ್ಷೆಗೆ ತಕ್ಕಂತೆ ಆಗಿಲ್ಲ. ಎಲ್ಲಾ ಮುಂಚೂಣಿ ಕಾರ್ಯಕರ್ತರು ತಪ್ಪದೇ ಈ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
18 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುನ್ನೆಚ್ಚರಿಕೆ ಲಸಿಕೆ ಡೋಸ್ ಅನ್ನು ಮುಂಚೂಣಿ ಕಾರ್ಯಕರ್ತರು ಎಲ್ಲರೂ ಪಡೆಯಬೇಕು. ಇದರಲ್ಲಿ 39% ಪ್ರಗತಿ ಆಗಿರುವುದು ಉತ್ತಮವಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆ ಡೋಸ್ ಲಸಿಕಾರಣವನ್ನು ದೊಡ್ಡ ಅಭಿಯಾನದಂತೆ ಮಾಡಿ ಹೆಚ್ಚು ಮಂದಿಗೆ ನೀಡಬೇಕು ಎಂದು ಸೂಚಿಸಲಾಗಿದೆ. ಮಕ್ಕಳ ಲಸಿಕೆ ಕೂಡ ಹೆಚ್ಚು ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.
ಕೋವಿಡ್ ಪರೀಕ್ಷೆಯನ್ನು ಇದೇ ರೀತಿ ಮುಂದುವರಿಸಬೇಕು. 60 ವರ್ಷ ಮೇಲ್ಪಟ್ಟವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಜೊತೆಗೆ ಅವರಿಗೆ ಹೆಚ್ಚು ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.
ಎಲ್ಲ ಜಿಲ್ಲೆ, ಗ್ರಾಮೀಣ ಪ್ರದೇಶಗಳಲ್ಲಿ ವಾರ್ ರೂಮ್ ನಿರ್ಮಿಸಿ, ಅದರ ಮೂಲಕ ಟೆಲಿ ಟ್ರಯಾಜಿಂಗ್ ಮಾಡಬೇಕು. ಪಾಸಿಟಿವ್ ಆದವರು ನೇರವಾಗಿ ಆಸ್ಪತ್ರೆಗೆ ಹೋಗುವಂತಾಗಬಾರದು. ಚಿಕಿತ್ಸೆ ಅಗತ್ಯವಿಲ್ಲದಿದ್ದರೂ ಆತಂಕದಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬೇಕು. ಅಗತ್ಯವಿರುವವರಿಗೆ ಮಾತ್ರ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು. ಹೋಮ್ ಐಸೋಲೇಶನ್ ಕಿಟ್ ಗಳನ್ನು ಪ್ರತಿ ರೋಗಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ವೈದ್ಯರ ನಡಿಗೆ, ಹಳ್ಳಿ ಕಡೆಗೆ ಎಂಬ ಪರಿಕಲ್ಪನೆಯನ್ನು ಮತ್ತೆ ಆರಂಭಿಸಲಾಗುವುದು. ವೈದ್ಯರು ಹಳ್ಳಿಗೆ ತೆರಳಿ, ಅಲ್ಲಿನ ಮನೆಗಳಲ್ಲಿ ಹಿರಿಯರ ಆರೋಗ್ಯದ ಮೇಲೆ ನಿಗಾ ಇರಿಸಲಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಗೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಸದ್ಯ 264 ಆಕ್ಸಿಜನ್ ಘಟಕಗಳಿದ್ದು, ಈ ಪೈಕಿ 222 ಘಟಕ ಕಾರ್ಯಾರಂಭವಾಗಿದೆ. ಇನ್ನೂ 17 ಸಿಎಸ್ ಆರ್ ಅನುದಾನದಡಿ ಅಳವಡಿಸುವ ಪ್ರಸ್ತಾಪವಿದೆ ಎಂದು ಮಾಹಿತಿ ನೀಡಿದರು.