ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ -ಸಚಿವ ಎಸ್.ಟಿ.ಎಸ್.

ಮಂಡ್ಯ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಮಂಡ್ಯದಲ್ಲಿರುವ ಜಗದ್ಗುರು ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಜನಸೇವಕ ಸಮಾವೇಶದಲ್ಲಿ ಮಾತನಾಡಿದರು.
ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವರ ಚಿಂತನೆಯಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.
ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ನುಡಿದಂತೆ ನಡೆದಿದ್ದಾರೆ ಎಂದು ಎಸ್.ಟಿ.ಎಸ್. ತಿಳಿಸಿದರು.
ಕೇಂದ್ರ ಸರ್ಕಾರದಿಂದ ಜನೌಷಧ ಕೇಂದ್ರವನ್ನು ಪ್ರಧಾನಿಗಳು ತೆರೆದಿದ್ದರಿಂದ ಅದೆಷ್ಟೋ ಬಡ ಜನರಿಗೆ, ಮಧ್ಯಮ ವರ್ಗದವರಿಗೆ ಉಪಯುಕ್ತವಾಗಿದೆ. ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಚೀಟಿ ನೀಡಿ, “ತಮ್ಮ ತಂದೆಯವರಿಗೆ ಚಿಕಿತ್ಸೆಗಾಗಿ ತಿಂಗಳಿಗೆ ಎರಡೂವರೆ ಸಾವಿರ ರೂಪಾಯಿ ಖರ್ಚು ಮಾಡಬೇಕಿತ್ತು. ಆದರೆ, ಜನೌಷಧ ಕೇಂದ್ರ ಬಂದ ಮೇಲೆ ಕೇವಲ 210 ರೂಪಾಯಿ ಸಾಕಾಗುತ್ತಿದೆ” ಎಂಬುದಾಗಿ ಬರೆದುಕೊಟ್ಟಿದ್ದರು ಎಂದು ಸಚಿವರಾದ ಸೋಮಶೇಖರ್ ಅವರು ಮಾಹಿತಿ ಹಂಚಿಕೊಂಡರು.
ಇಂದು ಆಯ್ಕೆಯಾದ ಗ್ರಾಪಂ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಗೆಲ್ಲಬೇಕು. ಇದಕ್ಕೋಸ್ಕರ ನಾವೆಲ್ಲರೂ ಶ್ರಮವಹಿಸೋಣ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಜನಸೇವಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು, ರಾಜ್ಯ ಭೂಪಟವನ್ನು ನಾನು ನೋಡಿದಾಗ ಮಂಡ್ಯ ಜಿಲ್ಲೆಯಲ್ಲಿ ಹಸಿರು ಬಣ್ಣವನ್ನು ಕಂಡಿದ್ದೆ. ಆದರೆ, ಇಂದು ಹಸಿರು ಬಣ್ಣ ಹೋಗಿದೆ, ಕೇಸರಿ ಬಂದಿದೆ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಸಂಪೂರ್ಣವಾಗಿ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ಹಾಗೂ ಮಂಡ್ಯ ಬಿಜೆಪಿ ಕೈಗೆ ಸಿಗುವುದಿಲ್ಲ ಎಂಬ ಮಾತುಗಳತ್ತು. ಅವು ಇಂದು ಹುಸಿಯಾಗಿ ಬದಲಾವಣೆ ಗಾಳಿ ಬೀಸುತ್ತಿದೆ. ಆ ಬಿರುಗಾಳಿಗೆ ಸಿಲುಕಿ ಕಾಂಗ್ರೆಸ್ ಪಕ್ಷವು ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದೆ. ಅಪ್ಪ – ಮಕ್ಕಳ ದರ್ಬಾರ್ ಮುಗಿಯಲಿದೆ ಎಂದು ಕಟೀಲ್ ಅವರು ಹೇಳಿದರು.
ಮಂಡ್ಯ ಉಸ್ತುವಾರಿ ಸಚಿವರಾದ ಕೆ.ಸಿ. ನಾರಾಯಣ ಗೌಡ ಮಾತನಾಡಿ, ನಾನು ಸೇವಕನಾಗಿ ದುಡಿಯುತ್ತೇನೆ. ಯಾವುದೇ ಆಸ್ತಿ-ಪಾಸ್ತಿ ಮಾಡುವವನಲ್ಲ. ಜನರಿಗೋಸ್ಕರ ದುಡಿಯುತ್ತೇನೆ. ಬಿಜೆಪಿ ಸಂಘಟನೆಗೆ ಒತ್ತು ಕೊಟ್ಟು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಕಾರಣರಾಗಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಹ ಮೈಸೂರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಕಾಣಲು ಕಾರಣಕರ್ತರಾಗಿದ್ದಾರೆ ಎಂದು ತಿಳಿಸಿದರು.
ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮುಖಂಡರು ಪುಷ್ಪವೃಷ್ಠಿಗೈದು ಅಭಿನಂದನೆ ಸಲ್ಲಿಸಿದರು.